ವಿಜಯಸಾಕ್ಷಿ ಸುದ್ದಿ, ಧಾರವಾಡ : ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ಮಾ.16ರಂದು `ರಾಷ್ಟ್ರೀಯ ಲೋಕ ಅದಾಲತ್’ನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ಧಾರವಾಡ ಪೀಠದ ನ್ಯಾಯಮೂರ್ತಿಗಳಾದ ಎಮ್.ಐ. ಅರುಣ್ ಅವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಸದರಿ ಅದಾಲತ್‌ನಲ್ಲಿ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಮತ್ತು ಅನಿಲ ಬಿ.ಕಟ್ಟಿ ಹಾಗೂ ಇವರೊಂದಿಗೆ ಲೋಕ ಅದಾಲತ್ ನ ಸದಸ್ಯರುಗಳಾದ ಎಮ್.ಸಿ. ಹುಕ್ಕೇರಿ, ಜಿ. ಎಮ್. ಭಟ್ಟ್ ಹೀಗೆ ಒಟ್ಟು ಎರಡು ಪೀಠಗಳನ್ನು ಆಯೋಜಿಸಲಾಗಿತ್ತು. ಸದರಿ ಅದಾಲತ್‌ನಲ್ಲಿ ಒಟ್ಟು 583 ಪ್ರಕರಣಗಳನ್ನು ಕೈಗೈತ್ತಿಕೊಳ್ಳಲಾಗಿತ್ತು. ಆ ಪೈಕಿ ಒಟ್ಟು 200 ಪ್ರಕರಣಗಳನ್ನು ರೂ.4,16,68,242 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು. ಸುಮಾರು 19 ವರ್ಷ ಹಳೆಯ ದಿವಾಣಿ ಪ್ರಕರಣವನ್ನು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹಾಗೂ ಎಮ್.ಸಿ. ಹುಕ್ಕೇರಿ, ಸದಸ್ಯರು ಮತ್ತು ಪಕ್ಷಗಾರರ ವಕೀಲರುಗಳಾದ ಪದ್ಮಜಾ ತಾಡಪತ್ರಿ, ಎಸ್.ಎಲ್. ಮಟ್ಟಿ, ಎಸ್.ಎ. ಸಂಡೂರ ಇವರ ಸಹಕಾರದಿಂದ ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಿದ್ದು ವಿಶೇಷವಾಗಿತ್ತು.
ಸುಮಾರು 5 ವರ್ಷದಿಂದ ದೂರವಾಗಿದ್ದ ದಂಪತಿಗಳ ವ್ಯಾಜ್ಯವನ್ನು ನ್ಯಾಯಮೂರ್ತಿ ಅನಿಲ ಬಿ.ಕಟ್ಟಿ ಮತ್ತು ಜಿ. ಎಮ್. ಭಟ್ ರಾಜಿ ಸಂಧಾನದ ಮೂಲಕ ಒಂದುಗೂಡಿಸಿದರು.


