ಕಾರವಾರ:– ಕಾಳಿ ನದಿಗೆ ಕಟ್ಟಿದ ಸೇತುವೆ ದಿಢೀರ್ ಕುಸಿದ ಹಿನ್ನೆಲೆ ಟ್ರಕ್ ಬಿದ್ದು ಚಾಲಕನಿಗೆ ಗಾಯವಾದ ಘಟನೆ ಜರುಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕೋಡಿಭಾಗ್‌ನಲ್ಲಿರುವ ಈ ಸೇತುವೆಯನ್ನು ಕಾರವಾರ- ಗೋವಾ ನಡುವಿನ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 60 ವರ್ಷ ಹಳೆಯದಾದ ಸೇತುವೆ.
ಇತ್ತೀಚೆಗೆ ನಿರ್ಮಿಸಲಾದ ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಹಳೆಯ ಸೇತುವೆಯನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.
ಮಳೆ ಹಾಗೂ ನೀರಿನ ರಭಸ ಹೆಚ್ಚಾಗಿ ಸೇತುವೆ ಕುಸಿದು ಕೆಳಗೆ ಬಿದ್ದಿದ್ದು, ಅದರ ಮೇಲಿದ್ದ ಟ್ರಕ್ ಕೆಳಗೆ ಬಿದ್ದು ಚಾಲಕನಿಗೆ ಗಾಯವಾಗಿದೆ. ಚಾಲಕನನ್ನು ಅಗ್ನಿಶಾಮಕ ಹಾಗೂ ಪೊಲೀಸ್ ಸಿಬ್ಬಂದಿ ರಕ್ಷಿಸಿದ್ದಾರೆ.
ಲಾರಿ ಚಾಲಕ ಕೇರಳ ಮೂಲದ ರಾಧಾಕೃಷ್ಣ ನಾಳಾ ಸ್ವಾಮಿ(37) ರಕ್ಷಣೆಗೊಳಗಾದವರು. ಟ್ರಕ್ ಸಂಪೂರ್ಣ ನೀರಿನಲ್ಲಿ ಮುಳುಗಿದೆ.
ವಿಷಯ ತಿಳಿದ ಕೂಡಲೇ ಎಚ್ಚೆತ್ತ ಉತ್ತರಕನ್ನಡ ಎಸ್.ಪಿ ನಾರಾಯಣ್, ಎಎಸ್‌ಪಿ ಜಯಕುಮಾರ ಹಾಗೂ ಡಿಎಸ್‌ಪಿ ಗಿರೀಶ್ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿದೆ.
ಲಾರಿ ಚಾಲಕನನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಡಿಸಿ ಲಕ್ಷ್ಮಿಪ್ರಿಯಾ ಮಧ್ಯರಾತ್ರಿ ಸ್ಥಳಕ್ಕೆ ಧಾವಿಸಿದ್ದು, ಮಾಹಿತಿ ಪಡೆದರು.
ಅವೈಜ್ಞಾನಿಕ ಕಾಮಗಾರಿಯಿಂದ ಕಳೆದ 15 ದಿನಗಳ ಹಿಂದಷ್ಟೆ ಶಿರೂರು ಗುಡ್ಡ ಕುಸಿತ ಆಗಿತ್ತು. ಈಗ ಹಳೆಯ ಸೇತುವೆ ಬಿದ್ದಿರುವ ಹಿನ್ನೆಲೆಯಲ್ಲಿ, ಐಆರ್‌ಬಿಯಿಂದ ನಿರ್ಮಾಣ ಮಾಡಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಈಗ ಕುಸಿದ ಸೇತುವೆಯ ಪಕ್ಕದಲ್ಲಿರುವ ಹೊಸ ಸೇತುವೆಯ ಗುಣಮಟ್ಟ ಪರೀಕ್ಷೆ ಮಾಡಲು, ಸೇತುವ ಗುಣಮಟ್ಟದ ಬಗ್ಗೆ 12 ಗಂಟೆಯೊಳಗೆ ವರದಿ ಸಲ್ಲಿಸುವಂತೆ IRB ಹಾಗೂ NHAIಗೆ ಡಿಸಿ ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.