ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನ ಯಲ್ಲಾಪುರ ತಾಂಡಾದ ಗ್ರಾಮಸ್ಥರಿಗೆ ಬಗರ್ ಹುಕುಂ ಜಮೀನುಗಳಲ್ಲಿ ಇನ್ನು ಮುಂದೆ ಯಾವುದೇ ರೀತಿ ಸಾಗುವಳಿ ಮಾಡಬಾರದು, ಸರಕಾರಿ ಭೂಮಿಗಳಲ್ಲಿ ಉಳಿಮೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಮಾಹಿತಿ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದ್ದಂತೆಯೇ ರೊಚ್ಚಿಗೆದ್ದ ಸಾಗುವಳಿದಾರರು ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ ನೇತೃತ್ವದಲ್ಲಿ ಸೋಮವಾರ ಪಟ್ಟಣದ ತಹಸೀಲ್ದಾರ ಕಚೇರಿ ಮುಂದೇ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ರವಿಕಾಂತ ಅಂಗಡಿ, ಮುಖ್ಯಮಂತ್ರಿಗಳು ಹೊಸಪೇಟೆಯಲ್ಲಿ ಬೃಹತ್ ಸಮಾವೇಶ ಮಾಡಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಲಕ್ಷಾಂತರ ಜನರಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಆದರೆ ತಾಲೂಕಿನ ಯಲ್ಲಾಪೂರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಅಲ್ಪ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರ ಮಾಡಹೊರಟಿದೆ. ತಹಸೀಲ್ದಾರರು, ಜಿಲ್ಲಾಧಿಕಾರಿಗಳು, ಶಾಸಕರು ಕೂಡಲೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಂಡು ಹಿರಿಯರ ಕಾಲದಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತರಿಗೆ ಹಕ್ಕುಪತ್ರ ವಿತರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಹೇಳಿದರು.
ಜಿ.ಪಂ ಮಾಜಿ ಸದಸ್ಯ ದೀಪಕ ಲಮಾಣಿ ಮಾತನಾಡಿ, ಸಂಸ್ಥಾನಿಕ ಕಾಲದಿಂದಲೂ ಸಮುದಾಯದ ಜನರು ಉಳುಮೆ ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಬಲವಾದ ಸಾಕ್ಷ್ಯಾಧಾರಗಳಿವೆ ಎಂದರು.
ಸಂಜೆಯ ವೇಳೆಗೆ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವಾಸುದೇವ ಸ್ವಾಮಿ, ಯಲ್ಲಾಪೂರ ಗ್ರಾಮದಲ್ಲಿ ಬಗರ್ ಹುಕುಂ ಭೂಮಿಗಳಲ್ಲಿ ಉಳುಮೆ ಮಾಡಬಾರದು ಎನ್ನುವ ವಿಷಯ ಸತ್ಯಕ್ಕೆ ದೂರವಾಗಿದೆ. ರೈತರಿಗೆ ಯಾವುದೇ ನೋಟಿಸು ನೀಡಿಲ್ಲ. ಇತ್ತೀಚೆಗಷ್ಟೇ ಭೂಮಿಯ ಆಸೆಗಾಗಿ ಉಳುಮೆ ಪ್ರಾರಂಭಿಸಿರುವ ರೈತರಿಗೆ ತಿಳುವಳಿಕೆ ಮೂಡಿಸುವ ಸಲುವಾಗಿ ವಾಟ್ಸಪ್ ಸಂದೇಶ ಕಳುಹಿಸಲಾಗಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಯಾವುದೇ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು.
ಈ ವೇಳೆ ವಾಯ್.ಎಸ್. ಪೂಜಾರ, ಪುಂಡಲೀಕ ಲಮಾಣಿ, ಓಂಕಾರಪ್ಪ ಲಮಾಣಿ, ಥಾವರೆಪ್ಪ ಲಮಾಣಿ, ಡಾಕಪ್ಪ ಲಮಾಣಿ, ಲಿಂಬಣ್ಣ ಲಮಾಣಿ, ಲಕ್ಷ್ಮಣ ಲಮಾಣಿ, ರಾಮಚಂದ್ರಪ್ಪ ಲಮಾಣಿ, ಚಂದ್ರಪ್ಪ ಲಮಾಣಿ, ನಾಗಪ್ಪ ಲಮಾಣಿ, ಮಲ್ಲೇಶ ಲಮಾಣಿ, ಗಂಗವ್ವ ಲಮಾಣಿ, ಶಾಂತವ್ವ ಲಮಾಣಿ, ದ್ಯಾಮಕ್ಕ ಲಮಾಣಿ, ಶೀಲವ್ವ ಲಮಾಣಿ, ಶಿವಕ್ಕ ಲಮಾಣಿ, ಸುನೀಲ್ ಲಮಾಣಿ, ಮಹಾದೇವಪ್ಪ ಲಮಾಣಿ, ಕಿರಣ ಲಮಾಣಿ, ಸೋಮಣ್ಣ ಲಮಾಣಿ, ಮಹಾಂತೇಶ ಇಟಗಿ, ಸೇರಿದಂತೆ ಅನೇಕರು ಹಾಜರಿದ್ದರು.
ಯಲ್ಲಾಪುರ ಗ್ರಾಮದಲ್ಲಿ ಹಿರಿಯ ಕಾಲದಿಂದಲೂ ಅಲ್ಪ ಜಮೀನಿನಲ್ಲಿ ಉಳುಮೆ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸದೇ ಆದಷ್ಟು ಬೇಗ ಹಕ್ಕುಪತ್ರ ನೀಡಿ ಜೀವನ ಭದ್ರತೆ ಒದಗಿಸಬೇಕು. ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು ಇಂತಹ ಗಂಭೀರವಾದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಜನರ ಸಮಸ್ಯೆ ಬಗೆಹರಿಸುವತ್ತ ಚಿತ್ತ ಹರಿಸಬೇಕು.
– ರವಿಕಾಂತ ಅಂಗಡಿ.
ಗದಗ ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ.