ದರ್ಶನ್–ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ಸ್ ವಾರ್ ಇದೀಗ ನಟರ ಆಪ್ತರ ನಡುವೆಯೂ ವಿಸ್ತರಿಸುತ್ತಿದೆ. ಸುದೀಪ್ ನೀಡಿದ ಹೇಳಿಕೆ ಬಳಿಕ ದರ್ಶನ್ ಅವರ ಆಪ್ತ ಧನ್ವೀರ್ ಗೌಡ ಹಂಚಿಕೊಂಡಿದ್ದ “ಸಿಂಹ” ಪೋಸ್ಟ್ ಹೊಸ ವಿವಾದಕ್ಕೆ ಕಾರಣವಾಗಿದೆ.
ಈ ಪೋಸ್ಟ್‌ಗೆ ಉತ್ತರಿಸಿದ ಸುದೀಪ್ ಆಪ್ತ ವಿನಯ್ ಗೌಡ, “ಕಾಡಿನ ರಾಜ ಸಿಂಹ ಎಂಬುದು ಗೊತ್ತು, ಆದರೆ ಆ ಸಿಂಹ ಸುದೀಪ್” ಎಂದು ಹೇಳುವ ಮೂಲಕ ಧನ್ವೀರ್‌ಗೆ ನೇರ ತಿರುಗೇಟು ನೀಡಿದ್ದಾರೆ. ಈ ಮೂಲಕ ಫ್ಯಾನ್ಸ್ ವಾರ್‌ಗೆ ಮತ್ತಷ್ಟು ಇಂಧನ ಸಿಕ್ಕಂತಾಗಿದೆ.
ಗಮನಾರ್ಹ ಅಂಶವೆಂದರೆ, ವಿನಯ್ ಗೌಡ ಅವರು ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದಲ್ಲೂ ಅಭಿನಯಿಸಿದ್ದರು. ಆದರೆ ಅವರು ಸಿನಿಮಾದ ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರಲಿಲ್ಲ. ಈ ಬಗ್ಗೆ ಮಾತನಾಡಿದ್ದ ವಿನಯ್, ಖಾಸಗಿ ಕಾರಣಕ್ಕಾಗಿ ಪ್ರಚಾರಕ್ಕೆ ಹೋಗಿಲ್ಲ ಎಂದು ಹೇಳಿಕೊಂಡಿದ್ದರು. ಆದರೆ ‘ಡೆವಿಲ್’ ಸಿನಿಮಾದ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದೇ ಒಂದು ಪೋಸ್ಟ್ ಕೂಡ ಹಂಚಿಕೊಂಡಿಲ್ಲ.
ಇದೇ ವೇಳೆ, ‘ಡೆವಿಲ್’ ಚಿತ್ರತಂಡ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ವಿನಯ್ ಗೌಡ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. “ನಾನು ಪೇಯ್ಡ್ ಆಕ್ಟರ್. ಸಂಭಾವನೆ ಕೊಟ್ಟರು ನಟಿಸಿದ್ದೇನೆ. ಬುಕ್ ಮೈ ಶೋನಲ್ಲಿ ಸಿನಿಮಾದಲ್ಲಿ ನಟಿಸಿರುವ ಎಲ್ಲರ ಹೆಸರಿದೆ, ಆದರೆ ನನ್ನ ಹೆಸರಿಲ್ಲ. ನಾನು ಮಾತನಾಡದೇ ಇರೋದು ದರ್ಶನ್ ಅವರಿಗೆ ಕಾನೂನಾತ್ಮಕ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ” ಎಂದು ಹೇಳಿದ್ದರು.
ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವಿನಯ್ ಗೌಡ, ಅಲ್ಲಿ ಸುದೀಪ್ ಅವರ ಆತ್ಮೀಯತೆ ಪಡೆದಿದ್ದರು. ಇದೀಗ ಸುದೀಪ್ ವಿರುದ್ಧ ನಡೆಯುತ್ತಿರುವ ಪೋಸ್ಟ್‌ಗಳಿಗೆ ಪ್ರತಿಯಾಗಿ ಸಹಜವಾಗಿಯೇ ವಿನಯ್ ಗೌಡ ಅವರು ಕಿಚ್ಚ ಬೆಂಬಲಕ್ಕೆ ನಿಂತಿದ್ದಾರೆ.



