ಬೆಂಗಳೂರು:- ಕಬ್ಬು ಟ್ರ್ಯಾಕ್ಟರ್ ಗಳಿಗೆ ಬೆಂಕಿ ಹಚ್ಚಿರೋದು ರೈತರಲ್ಲ, ಯಾವ ಅನ್ನದಾತರು ಇಂತಹ ಕೃತ್ಯ ಮಾಡಲ್ಲ. ಇದು ಕಿಡಿಗೇಡಿಗಳ ಕೆಲಸ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ 25 ರಿಂದ 50 ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಾಕಲಾಗಿದೆ. ಬೆಳಗಾವಿಯ ಪ್ರತಿಭಟನೆಯಲ್ಲೂ ಇದೇ ರೈತರು ಪ್ರತಿಭಟನೆ ಮಾಡಿದ್ರು. ಎಫ್‌ಆರ್‌ಪಿ 3,300 ರೂ.ಗೆ ಒಪ್ಪಿಕೊಂಡಿದ್ರು. ಇದೀಗ ಮುಧೋಳದಲ್ಲಿ ಹೋರಾಟ ನಡೆಸಿದ್ದಾರೆ ಎಂದು ಬೇಸರಿಸಿದರು.
ಸಕ್ಕರೆ ಕಾರ್ಖಾನೆ ಮಾಲೀಕರ ಸ್ಥಿತಿಗತಿ ನೋಡಿಯೇ 3,300 ರೂ. ನಿಗದಿ ಮಾಡಲಾಗಿತ್ತು. ನೀವೆ ಕಷ್ಟಪಟ್ಟು ಬೆಳೆದ ಕಬ್ಬಿಗೆ, ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚೋದು ದುರ್ದೈವ. ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಘಟನಾ ಸ್ಥಳಕ್ಕೆ ಹೋಗ್ತೀನಿ. ಬೆಂಕಿಗಾಹುತಿಯಾದ ಟ್ರ್ಯಾಕ್ಟರ್ ಮತ್ತು ಕಬ್ಬಿಗೆ ಅಲ್ಪ ಪ್ರಮಾಣದ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ರೈತರು ಎಫ್‌ಆರ್‌ಪಿಗಾಗಿ ಬೇಕಿದ್ರೆ ಇನ್ನೂ ಹೋರಾಟ ಮಾಡಲಿ. ಆದರೆ, ಅದು ಶಾಂತಿಯುತವಾಗಿರಲಿ. ಕಬ್ಬು ಬೆಳೆಗಾರರ ಹೋರಾಟ ರಾಜ್ಯದಲ್ಲಿ ಎಲ್ಲೂ ಇಲ್ಲ. ಮುಧೋಳದಲ್ಲಿ ಮಾತ್ರ ಇದೆ ಎಂದು ಹೇಳಿದರು.



