ಬೆಳಗಾವಿ:- ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆಗೆ ಆಗ್ರಹಿಸಿ ಕಬ್ಬು ಬೆಳೆಗಾರರ ಹೋರಾಟ 7ನೇ ದಿನಕ್ಕೆ ಕಾಲಿಟ್ಟಿದೆ.
ಕ್ಷಣ ಕ್ಷಣಕ್ಕೂ ಅನ್ನದಾತರ ಆಕ್ರೋಶದ ಕಟ್ಟೆ ಒಡೆಯುತ್ತಲೇ ಇದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಹೋರಾಟ ತೀವ್ರಗೊಂಡಿದೆ. ಮೊದಲೇ ಬಿರು ಬಿಸಿಲಿನಲ್ಲಿ ರಣ ರಣ ಅಂತ ಹೋರಾಡ್ತಿದ್ದ ರೈತರಿಗೆ ಬಿಜೆಪಿ ರಾಜ್ಯ ಸಾರಥಿಯ ರಂಗಪ್ರವೇಶ ಮತ್ತಷ್ಟು ಬಲ ತಂದಿದೆ.
ಕಳೆದ ರಾತ್ರಿ ರೈತರೊಂದಿಗೆ ಅಹೋರಾತ್ರಿ ಧರಣಿ ಮಾಡಿದ್ದ ವಿಜಯೇಂದ್ರ ಇಂದು ತಮ್ಮ ಹುಟ್ಟುಹಬ್ಬವನ್ನು ರೈತರ ಜೊತೆಗೆ ಆಚರಿಸಿಕೊಂಡಿದ್ದಾರೆ. ಬೆಳಗಾವಿಯ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ. ರೈತರ ಬೇಡಿಕೆಯು ನ್ಯಾಯಯುತವಾಗಿದ್ದು, ಬೆಂಬಲ ಬೆಲೆಯೂ ಭಿಕ್ಷೆ ಅಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರದ ಜೊತೆಯೂ ಕಬ್ಬು ಬೆಂಬಲ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಾಗಿ ವಿಜಯೇಂದ್ರ ಹೇಳಿದ್ದಾರೆ.
ಇನ್ನೂ ಕಿತ್ತೂರು ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ದಿನೇ ದಿನೇ ತೀವ್ರಗೊಳ್ತಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರದಲ್ಲಿ ಪ್ರತಿಭಟನೆಯ ಕಿಚ್ಚು ಧಗಧಗಿಸ್ತಿದೆ. ಅಹೋರಾತ್ರಿ ಹೋರಾಟಕ್ಕೆ ವಿಜಯೇಂದ್ರ ಸಾಥ್ ಕೊಟ್ಟಿದ್ದು ರೈತರಿಗೆ ಮತ್ತಷ್ಟು ಬಲ ಬಂದಿದೆ. ಇತ್ತ ರಾಜ್ಯ ಸರ್ಕಾರ ಮಾತ್ರ ಮತ್ತೆ ಕೇಂದ್ರದತ್ತ ಬೊಟ್ಟು ಮಾಡ್ತಾ ಜಾರಿಕೊಳ್ತಿದೆ.



