ಬೆಂಗಳೂರು:- ಪ್ರತಿ ಟನ್ ಕಬ್ಬಿಗೆ 3500 ಘೋಷಿಸಬೇಕು ಅಂತ ರೈತರು ಕಳೆದ 9 ದಿನದಿಂದಲೂ ಪ್ರತಿಭಟನೆ ಮಾಡುತ್ತಿದ್ದರು ಕೂಡ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ಒಂದು ಟ್ವೀಟ್ ಮಾಡಿಲ್ಲ ಏಕೆ ಅಂತ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.
ಪೊನ್ನಂಪೇಟೆಯಲ್ಲಿ ಮಾತಾನಾಡಿದ ಅವರು, ರಾಜ್ಯ ಸರ್ಕಾರ ಸಭೆ ಕರೆದು ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುತ್ತಿದೆ. ಆದರೆ ಕೇಂದ್ರ ಕೃಷಿ ಸಚಿವರು ಈ ಕುರಿತು ಒಂದೂ ಸಭೆ ಮಾಡಿಲ್ಲ. ಪ್ರಧಾನಿ ಮೋದಿ ಟ್ವೀಟ್ ಮಾಡಿಲ್ಲ ಎಂದು ಕಿಡಿಕಾರಿದರು. ನ್ಯಾಯಯುತ ಮತ್ತು ಲಾಭದಾಯಕ ದರವನ್ನು ನಿಗದಿ ಮಾಡುವುದು, ಸಕ್ಕರೆ ಆಮದು, ರಫ್ತು ನಿಯಮ ಮಾಡುವುದು, ಎಥೆನಾಲ್ ಅನ್ನು ಎಷ್ಟು ಬಳಕೆ ಮಾಡಬೇಕು ಎಂದು ತಿರ್ಮಾನ ಮಾಡುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರ ಅಲ್ಲ. ರಫ್ತು, ಆಮದು ನೀತಿಯು ಕಬ್ಬಿನ ದರದ ಮೇಲೆ , ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಎಲ್ಲಾ ತೀರ್ಮಾನಗಳು ಕೇಂದ್ರದ ಕೈಯಲ್ಲಿ ಇವೆ. ಅಧಿಕಾರವೂ ಅವರ ಕೈಯಲ್ಲಿದೆ. ಜವಾಬ್ದಾರಿ ಮಾತ್ರ ಬೇರೆಯವರ ಮೇಲೆ ಎಂದರೆ ಹೇಗೆ ಸಾಧ್ಯ? ಅಧಿಕಾರ ಯಾರ ಕೈಯಲ್ಲಿ ಇದೆ ಅವರು ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ಈ ಕುರಿತು ಪ್ರಧಾನಿಯವರು ಪ್ರತಿಕ್ರಿಯಿಸಬೇಕು ಎಂದರು.
ಬಿಜೆಪಿಯ ಇಲ್ಲಿನ ನಾಯಕರು ರೈತರೊಂದಿಗೆ ಮಲಗಿ ಪ್ರತಿಭಟಿಸುವುದನ್ನು ಬಿಟ್ಟು ದೆಹಲಿಗೆ ಹೋಗಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ನಾಟಕ ಮಾಡುವುದರಿಂದ ರೈತರಿಗೆ ಅನುಕೂಲ ಆಗುವುದಿಲ್ಲ. ಬಿಜೆಪಿಯ ರಾಜಕೀಯ ಬೇಳೆ ಬೇಯಬಹುದು ಅಷ್ಟೇ ಆದರೆ ರೈತರಿಗೆ ಸಹಾಯ ಆಗುವುದಿಲ್ಲ. ಎಲ್ಲಾ ಅಧಿಕಾರ ಕೇಂದ್ರದ ಕೈಯಲ್ಲಿ ಇದೆ ಹೋಗಿ ಅಲ್ಲಿ ಕುಳಿತು ಪರಿಹರಿಸಿ ರೈತರಿಗೆ ಅನುಕೂಲ ಮಾಡಲಿ ಎಂದು ಹೇಳಿದರು.


