ಬೆಳಗಾವಿ: ಕಬ್ಬು ಬೆಲೆ ನಿಗದಿಗಾಗಿ ಬೆಳಗಾವಿಯ ಗುರ್ಲಾಪೂರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತ ಮುಖಂಡರೊಂದಿಗೆ ಕಾನೂನು ಸಚಿವ ಎಚ್‌ಕೆ ಪಾಟೀಲ್ ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಸಚಿವರು ಹಾಗೂ ರೈತರೊಂದಿಗೆ ಸರಿಸುಮಾರು 1 ವರೆ ಗಂಟೆಗಳ ಸಂಧಾನ ಸಭೆ ವಿಫಲವಾಗಿದೆ. ಈ ಬಗ್ಗೆ ರೈತ ಮುಖಂಡ ಶಶಿಕಾಂತ ಗುರುಜಿ ಮಾತನಾಡಿ, ಗುರುವಾರ ಸಂಜೆ 5 ಗಂಟೆಗೆ ಅಂತಿಮ ಗಡುವು ನೀಡಲಾಗಿದೆ. ನಮ್ಮ ಬೇಡಿಕೆ ಈಡೇರಿಸದಿದ್ದರೆ, ನವೆಂಬರ್ 7ರಿಂದ 50 ಲಕ್ಷ ಹೋರಾಟಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆ ಪಂಜಾಬ್ ಮಾದರಿ ಅಲ್ಲ, ಗುರ್ಲಾಪೂರ ಮಾದರಿಯಲ್ಲಿ ನಿರ್ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಭೆಯಲ್ಲಿ ಏನೆಲ್ಲಾ ಆಯ್ತು?
ಸಚಿವ ಎಚ್‌ಕೆ ಪಾಟೀಲ್ ಮುಖ್ಯಮಂತ್ರಿಗಳ ಜವಾಬ್ದಾರಿಯಡಿ ಸ್ಥಳಕ್ಕೆ ಬಂದು ಮಾತನಾಡಿದ್ದು, “ನಾಳೆ(ಬುಧವಾರ) ಸಂಜೆ 6 ಗಂಟೆಗೆ 10-20 ರೈತರು ಬೆಂಗಳೂರಿಗೆ ಬನ್ನಿ, ಸಿಎಂ ಮುಂದೆ ಮಾತಾಡೋಣ. 7ನೇ ತಾರೀಖಿನೊಳಗೆ ನಿಮ್ಮ ಬೇಡಿಕೆಗೆ ಪರಿಹಾರ ನೀಡುತ್ತೇವೆ. ನಿಮ್ಮ ಪರ ವಕೀಲನಾಗಿ ನಾನು ಸಿಎಂ ಮುಂದೆ ಮಾತನಾಡುತ್ತೇನೆ” ಎಂದರು.
ಆದರೆ ರೈತರು ಬೆಂಗಳೂರಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿ, ನಾಳೆ ಸಂಜೆ ತನಕ ಡೆಡ್‌ಲೈನ್ ನೀಡಿರುವಂತೆ ಡಿಸಿ ಮತ್ತು ಎಸ್‌ಪಿಯವರನ್ನು ಕರೆದು ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಭೆಯ ವೇಳೆ ಅವರು ಸಚಿವರ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟನೆಯ ತೀವ್ರತೆ ತೋರಿಸಿದರು.
ಇದಕ್ಕೂ ಮುನ್ನ, ಕೊರೆಯುವ ಚಳಿಯಲ್ಲಿಯೂ ಹೋರಾಟ ಮುಂದುವರಿದಿದ್ದು, ರೈತರು ರಸ್ತೆಯಲ್ಲೇ ಊಟ, ನಿದ್ದೆ ನಡೆಸುತ್ತಿದ್ದಾರೆ. ಮೈಮೇಲೆ “ಒಂದು ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿ ಮಾಡಿರಿ” ಎಂಬ ಬರವಣಿಗೆಯೊಂದಿಗೆ ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಅರೆ ಬೆತ್ತಲೆ ಹೋರಾಟದಲ್ಲಿರುವ ರೈತರಿಗೆ ಜಿಲ್ಲಾ ಆಸ್ಪತ್ರೆಗಳ ವೈದ್ಯರು ಸಹಕಾರ ನೀಡಿದ್ದಾರೆ. ಅಲ್ಲದೆ, ಅಥಣಿ ಪಟ್ಟಣದಲ್ಲಿ ರೈತರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ತೋರಿಸಿದ್ದಾರೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ ಭಾಗದಲ್ಲೂ ರೈತರ ಪ್ರತಿಭಟನೆ ಜೋರಾಗಿದೆ. ಬಿಜೆಪಿ ಕಾರ್ಯಕರ್ತರು ಮತ್ತು ಕರವೇ ಸಂಘಟನೆ ಸಹ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ನಾಳೆ ಈ ವಿಷಯ ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ಹೋಗುವ ಸಾಧ್ಯತೆ ಇದೆ ಎನ್ನಲಾಗಿದೆ.



