ಬೆಂಗಳೂರು:- ನಗರದಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಲ್ಲಿ ಪತ್ನಿ, ಅತ್ತೆ ಮತ್ತು ಪತ್ನಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಅತುಲ್ ಪತ್ನಿ, ಎ1 ನಿಖಿತಾ ಸಿಂಘಾನಿಯ, ಆತುಲ್ ಅತ್ತೆ, ಎ2 ನಿಶಾ ಸಿಂಘಾನಿಯಾ, ಭಾಮೈದ ಎ3 ಅನುರಾಗ್ನನ್ನು ಪೊಲೀಸರು ಬಂಧಿಸಿ ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಅತುಲ್ ಪತ್ನಿ ನಿಖಿತಾಳನ್ನು ಬಂಧಿಸಲಾಗಿದ್ದು, ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಿಶಾ ಹಾಗೂ ಅನುರಾಗ್ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಪೊಲೀಸರಿಗೆ ಹಲವು ವಿಚಾರಗಳು ಗೊತ್ತಾಗಿವೆ. ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಳ್ಳಲು 15 ದಿನಗಳ ಹಿಂದೆಯೇ ನಿರ್ಧರಿಸಿದ್ದರು. ಆತ್ಮಹತ್ಯೆಗೂ ಮುನ್ನ ಮೂರು ದಿನದ ಹಿಂದೆ ಡೆತ್ ನೋಟ್ ಬರೆದಿಟ್ಟಿದ್ದರು. ಅಲ್ಲದೇ, ಕಾನೂನಿನ ವಿಚಾರಗಳ ಬಗ್ಗೆ ಗೂಗಲ್ನಲ್ಲಿ ಸರ್ಚ್ ಮಾಡಿದ್ದರು ಎಂದು ಪೊಲೀಸರು ತನಿಖೆಯಲ್ಲಿ ಕಂಡುಕೊಂಡಿದ್ದಾರೆ.
ಘಟನೆ ಹಿನ್ನೆಲೆ:-
ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್ ಡಿಸೆಂಬರ್ 9ರಂದು ಮಾರತ್ತಹಳ್ಳಿಯ ಮಂಜುನಾಥ ಲೇಔಟ್‍ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಅವರು ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದರು. ಸುಮಾರು 1 ಗಂಟೆಗೂ ಅಧಿಕ ಕಾಲದ ವಿಡಿಯೋವನ್ನು ಮಾಡಿದ್ದರು.