ರಾಯಚೂರು:- ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿದ್ದು, ಪತಿಯೇ ಕೊಲೆ ಮಾಡಿ ಬಳಿಕ ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಘಟನೆ ನಗರದ ವಾಸವಿನಗರದಲ್ಲಿ ಜರುಗಿದೆ.
35 ವರ್ಷದ ಪ್ರಸನ್ನ ಲಕ್ಷ್ಮೀ ಮೃತ ಮಹಿಳೆ. ಪತಿ ಜಂಬನಗೌಡ ವಿರುದ್ಧ ಕೊಲೆ ಆರೋಪ ಕೇಳಿ ಬಂದಿದೆ. ಪತಿ ಜಂಬನಗೌಡ ಕುಡಿದು ಬಂದು ಡಿವೋರ್ಸ್‌ಗಾಗಿ ಪತ್ನಿ ಪ್ರಸನ್ನ ಲಕ್ಷ್ಮೀಯನ್ನು ನಿತ್ಯ ಪೀಡಿಸುತ್ತಿದ್ದ. ಮದುವೆಯಾಗಿ 16 ವರ್ಷಗಳ ಬಳಿಕ ಪತಿ ಡಿವೋರ್ಸ್‌ಗಾಗಿ ಪೀಡಿಸುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
14 ದಿನಗಳ ಹಿಂದೆಯಷ್ಟೇ ಮನೆ ಬದಲಾಯಿಸಿ ಪ್ರಸನ್ನ ಲಕ್ಷ್ಮೀ ಕುಟುಂಬ ಬಾಡಿಗೆ ಮನೆಯಲ್ಲಿದ್ದರು. ಕೌಟುಂಬಿಕ ಕಲಹದಿಂದ ಕಳೆದ 1 ವಾರದಿಂದ ಜಂಬನಗೌಡ ಕುಟುಂಬದಿಂದ ದೂರ ಉಳಿದಿದ್ದ. ಪತಿ ಕಿರುಕುಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಲು ಪ್ರಸನ್ನ ಲಕ್ಷ್ಮೀ ಮುಂದಾಗಿದ್ದರು. ರಾತ್ರಿ ವೇಳೆ ಮಕ್ಕಳು ಹೊರಗಡೆ ಹೋಗಿದ್ದಾಗ ಘಟನೆ ನಡೆದಿದೆ. ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಸನ್ನ ಲಕ್ಷ್ಮೀ ಶವ ಪತ್ತೆಯಾಗಿದ್ದು, ಪತಿ ಜಂಬನಗೌಡ ಪರಾರಿಯಾಗಿದ್ದಾನೆ.
ತಾಯಿ ಸಾವಿನಿಂದ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ. ಗಂಡ, ಅತ್ತೆ, ಮಾವನ ಕಿರುಕುಳದಿಂದಲೇ ಘಟನೆ ನಡೆದಿದೆ ಎಂದು ಪ್ರಸನ್ನ ಲಕ್ಷ್ಮೀ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.