ವಿಜಯಸಾಕ್ಷಿ ಸುದ್ದಿ, ಗದಗ: ಮಾರ್ಚ್ 15ರಂದು ಬೆಟಗೇರಿಯಲ್ಲಿರುವ ಯಲ್ಲಪ್ಪ ಮಿಸ್ಕಿನ್ ಒಡೆತನದ ಆರತಿ ಫೈನಾನ್ಸ್ ಎದುರು ಪ್ರತಿಭಟನೆ ನಡೆಸಲು ತಿರ್ಮಾನಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಹಾಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ವಹಿಸದಿದ್ದರೆ ಆರತಿ ಫೈನಾನ್ಸ್ ಎದುರು ಆತ್ಮಹತ್ಯೆಗೆ ಶರಣಾಗುವುದಾಗಿ ಅಂಬಿಕಾ ಕಬಾಡಿ ಹೇಳಿದರು.
ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಡ್ಡಿ ದಂಧೆಕೋರರ ಹಾವಳಿಯಿಂದಾಗಿ ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರು ತತ್ತರಿಸಿ ಹೋಗಿದ್ದಾರೆ. ಇವರಿಗೆ ಯಾರ ಭಯವೂ ಇಲ್ಲದಂತಾಗಿದ್ದು, ಅಮಾಯಕರ ಜೀವ ಹಿಂಡುತ್ತಿದ್ದಾರೆ. ಬಡ್ಡಿಗೆ ಮೀಟರ್ ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡುವುದರ ಜೊತೆಗೆ ಹಲವರ ಆಸ್ತಿಯನ್ನು ಕಬಳಿಸಿದ್ದಾರೆ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅಂಬಿಕಾ ಕಬಾಡಿ ಒತ್ತಾಯಿಸಿದರು.
ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಾಕಷ್ಟು ಅನೈತಿಕ, ಅವ್ಯವಹಾರಗಳು ಹಾಗೂ ನಿರಂತರವಾಗಿ ಬಡ್ಡಿ ಫೈನಾನ್ಸ್ ದಂಧೆಕೋರರು ಅಮಾಯಕರ ಸುಲಿಗೆ ಮಾಡುತ್ತಾ ಬಂದಿದ್ದು, ಅವರ ವಿರುದ್ಧ ಅನೇಕ ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಾರ್ಚ್ 15ರಂದು ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಲಿದ್ದು, ನ್ಯಾಯ ಸಿಗದಿದ್ದಲ್ಲಿ ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿದರು.
ಬಡ್ಡಿ ದಂದೆಕೋರ ಯಲ್ಲಪ್ಪ ಮಿಸ್ಕಿನ್ ಅವರನ್ನು ಕೂಡಲೇ ಗಡಿಪಾರು ಮಾಡಬೇಕು. ಜೊತೆಗೆ, ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಅಮಾಯಕರಿಂದ ಪಡೆದ ಚೆಕ್, ಬಾಂಡ್ ಸೇರಿದಂತೆ ಇತರೆ ದಾಖಲೆಗಳನ್ನ ಮೂಲ ಮಾಲೀಕರಿಗೆ ತಲುಪಿಸಬೇಕು. ಅನಧಿಕೃತ ಫೈನಾನ್ಸ್ಗಳಿಗೆ ಕಡಿವಾಣ ಹಾಕಬೇಕೆಂದು ಅಂಬಿಕಾ ಕಬಾಡಿ ಆಗ್ರಹಿಸಿದರು.
ಈ ವೇಳೆ ದಾವಲ್ ಮುಳಗುಂದ, ಗಣಪತಿ ಹಬೀಬ, ಸಮೀರ್ ಉಕ್ಕಲಿ ಉಪಸ್ಥಿತರಿದ್ದರು.