ಸಮಸ್ಯೆಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ: ಡಾ. ನಾ. ಸೋಮೇಶ್ವರ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು, ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳು ಮಾನಸಿಕ ಗೊಂದಲದಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಇಂತಹ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆ ನಡೆಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕಿದೆ ಎಂದು ಸಾಹಿತಿ, ನಿರೂಪಕ ಡಾ. ನಾ. ಸೋಮೇಶ್ವರ ಹೇಳಿದರು.
ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಐಎಂಎ ಗದಗ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

Advertisement

ಕೆಲವೊಮ್ಮೆ ಪಾಲಕ/ಪೋಷಕರ ಒತ್ತಾಸೆಯ ಮೇರೆಗೆ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ಥಿಕ, ಕೌಟುಂಬಿಕ, ಒತ್ತಡ ಹಾಗೂ ಇನ್ನಿತರ ಕಾರಣಗಳಿಂದಾಗಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆತ್ಮಹತ್ಯೆಯೊಂದೇ ಸಮಸ್ಯೆಗೆ ಪರಿಹಾರವಲ್ಲ. ಖಿನ್ನತೆಗೆ ಒಳಗಾದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ತಜ್ಞ ವೈದ್ಯರಿಂದ ಆಪ್ತ ಸಮಾಲೋಚನೆ, ಐಎಂಎದಿಂದ ಆತ್ಮಸ್ಥೈರ್ಯ ತುಂಬಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಕಾರ್ಯ ಆಗಬೇಕಿದೆ. ಈ ರೀತಿಯ ಕಾರ್ಯ ಗದಗದಿಂದ ಆರಂಭಗೊಂಡು ರಾಜ್ಯದಲ್ಲಿ ಆಂದೋಲನದ ರೀತಿಯಲ್ಲಿ ನಡೆಯಲಿ ಎಂದರು.

ಐಎಂಎ ರಾಜ್ಯ ಘಟಕದ ನಿಕಟಪೂರ್ವ ಅಧ್ಯಕ್ಷ ಡಾ. ಮಧುಸೂಧನ್ ಕಾರಿಗನೂರ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿ, ರಾಜ್ಯ ಐಎಂಎಗೆ ಗದಗ ಐಎಂಎ ಬಹು ದೊಡ್ಡ ಕೊಡುಗೆ ನೀಡಿದೆ. ಜೊತೆಗೆ ರಾಜ್ಯ ಐಎಂಎ ಅಧ್ಯಕ್ಷ ಸ್ಥಾನಕ್ಕೆ ಗದಗದದ್ದೇ ಸಿಂಹಪಾಲು ಇದೆ ಎಂದರಲ್ಲದೆ, ಐಎಂಎ ಗದಗ ಶಾಖೆಯು ಶತಮಾನೋತ್ಸವದ ಸಂಭ್ರಮದ ವರ್ಷಾಚರಣೆಗೆ ಸಜ್ಜಾಗಿರುವುದು ಸಂತೋಷ ತಂದಿದೆ ಎಂದರು.

ಗದಗ ಐಎಂಎ ರಾಜ್ಯ, ರಾಷ್ಟ್ರೀಯ ಐಎಂಎಗೆ ಮಾದರಿ ಆಗುವಂತೆ ಕ್ರಿಯಾಶೀಲತೆಯಿಂದ ಕಾರ್ಯನಿರ್ವಹಿಸುವ ಮೂಲಕ ಶತಮಾನೋತ್ಸವವನ್ನು ವೈದ್ಯಕೀಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ, ಸಾಧನೆ ನೀಡುವಂತೆ ಆಚರಿಸುವಂತಾಗಲಿ ಎಂದು ಆಶಿಸಿದರು.

ಗದಗ ಐಎಂಎ ನೂತನ ಅಧ್ಯಕ್ಷ ಡಾ. ಶ್ರೀಧರ ವ್ಹಿ. ಕುರಡಗಿ ಹಾಗೂ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸುನೀತಾ ಎಸ್. ಕುರಡಗಿ ಮಾತನಾಡಿ, ಐಎಂಎ ಗದಗ ಶಾಖೆಯ ಶತಮಾನೋತ್ಸವ ವರ್ಷಾಚರಣೆಯನ್ನು ವೈವಿಧ್ಯಮಯ ಕಾರ್ಯಕ್ರಮಗಳನ್ನು ರೂಪಿಸಿ, ಸರ್ವರ ಸಹಕಾರದೊಂದಿಗೆ ಯಶಸ್ವಿಗೊಳಿಸುವುದಾಗಿ ಹೇಳಿದರು.

ವೇದಿಕೆಯ ಮೇಲೆ ಐಎಂಎ ರಾಷ್ಟ್ರೀಯ ಉಪಾಧ್ಯಕ್ಷ ಡಾ. ಜಿ.ಬಿ. ಬಿಡಿನಹಾಳ, ಕಾರ್ಯದರ್ಶಿ ಡಾ. ರಾಹುಲ್ ಶಿರೋಳ, ಖಜಾಂಚಿ ಡಾ. ಜಯರಾಜ ಪಾಟೀಲ, ಕಾರ್ಯದರ್ಶಿ ಡಾ. ಸಪನಾ ಜೋಷಿ, ಖಜಾಂಚಿ ಡಾ. ಜ್ಯೋತಿ ಪಾಟೀಲ ಉಪಸ್ಥಿತರಿದ್ದರು.

ಡಾ. ಪವನ ಪಾಟೀಲ ಸ್ವಾಗತಿಸಿದರು. ಡಾ. ತುಕಾರಾಮ ಸೋರಿ ವರದಿ ವಾಚಿಸಿದರು, ಡಾ. ಶೃತಿ ಪಾಟೀಲ ಹಾಗೂ ಡಾ. ಅರವಿಂದ ಕರಿನಾಗಣ್ಣವರ ನಿರೂಪಿಸಿದರು. ಕಾರ್ಯದರ್ಶಿ ಡಾ. ರಾಹುಲ್ ಶಿರೋಳ ವಂದಿಸಿದರು. ಸಮಾರಂಭದಲ್ಲಿ ಗದಗ ಐಎಂಎ ಸದಸ್ಯರು, ಗಣ್ಯರು ಪಾಲ್ಗೊಂಡಿದ್ದರು.

ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಿಂದ ಪ್ರಸಾರಗೊಂಡ ಜನಪ್ರಿಯ ‘ಥಟ್ ಅಂತ ಹೇಳಿ’ ಕನ್ನಡದ ರಸಪ್ರಶ್ನೆ ಕಾರ್ಯಕ್ರಮ 4 ಜನವರಿ 2002ರಲ್ಲಿ ಆರಂಭಗೊಂಡು 23 ವರ್ಷಗಳಿಂದ 5 ಸಾವಿರಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿ ಗಿನ್ನಿಸ್ ವಿಶ್ವ ದಾಖಲೆಗೂ ಸೇರ್ಪಡೆಗೊಂಡಿದೆ. 15 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದಾರೆ ಮತ್ತು 50 ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಗಿದೆ. ಇದು ಪವಾಡವೋ, ನನ್ನ ಪುಣ್ಯವೋ ತಿಳಿಯದಾಗಿದೆ.
ಡಾ. ನಾ. ಸೋಮೇಶ್ವರ
ಥಟ್ ಅಂತ ಹೇಳಿ’ ನಿರೂಪಕರು.


Spread the love

LEAVE A REPLY

Please enter your comment!
Please enter your name here