ದಿಸ್ಪುರ: ಅಸ್ಸಾಂ ರಾಜ್ಯದ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ ಸು-30 ಎಂಕೆಐ ಯುದ್ಧ ವಿಮಾನ ಪತನಗೊಂಡ ಪರಿಣಾಮ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳು ಹುತಾತ್ಮರಾಗಿದ್ದಾರೆ.
ಹುತಾತ್ಮರಾದ ಪೈಲಟ್‌ಗಳನ್ನು ಸ್ಕ್ವಾಡ್ರನ್ ಲೀಡರ್ ಅನುಜ್ ಹಾಗೂ ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಎಂದು ಗುರುತಿಸಲಾಗಿದೆ ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ.
Su-30 MKI ಯುದ್ಧ ವಿಮಾನವು ತರಬೇತಿ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಜೋರ್ಹತ್ ವಾಯುನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ ವಿಮಾನ ಸಂಪರ್ಕ ಕಡಿತಗೊಂಡಿತ್ತು. ನಂತರ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ದೂರದ ಗುಡ್ಡಗಾಡು ಪ್ರದೇಶದಲ್ಲಿ ಅದು ಪತನಗೊಂಡಿರುವುದು ಪತ್ತೆಯಾಗಿದೆ.
ರಷ್ಯಾ ಮೂಲದ ಈ ಯುದ್ಧ ವಿಮಾನದೊಂದಿಗೆ ರಾತ್ರಿ ಸುಮಾರು 7.42 ಗಂಟೆಗೆ ಸಂವಹನ ಕಳೆದುಹೋಗಿತ್ತು. ಬಳಿಕ ಬೆಟ್ಟ ಪ್ರದೇಶದಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಕುರಿತು ಭಾರತೀಯ ವಾಯುಪಡೆ ತನಿಖೆ ಆರಂಭಿಸಿದೆ.



