ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ವಿದ್ಯಾರ್ಥಿಗಳು ಏಕಾಗ್ರತೆಯನ್ನು ಮೈಗೂಡಿಸಿಕೊಂಡರೆ ಮಾತ್ರ ಅವರಿಗೆ ಮೌಲ್ಯಯುತ ಮತ್ತು ನೈತಿಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯ ಸಂಚಾಲಕಿ ಬಿ.ಕೆ. ಸರೋಜಕ್ಕ ಹೇಳಿದರು.
ಇಲ್ಲಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯಲ್ಲಿ ಕಳೆದ 10 ದಿನಗಳಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದು ಮಕ್ಕಳಲ್ಲಿ ಮುಖ್ಯವಾಗಿ ಬೇಕಾಗಿರುವ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ಇಲ್ಲದ್ದರಿಂದ ಭವಿಷ್ಯದಲ್ಲಿ ಅವರು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟದಿಂದ ದೂರ ಉಳಿಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಹಿರಿಯರಿಗೆ ಗೌರವ, ಸಾತ್ವಿಕ ಆಹಾರ ಸೇವನೆ, ಉತ್ತಮ ದಿನಚರಿ, ಒಳ್ಳೆಯ ಸ್ನೇಹವನ್ನು ಬೆಳೆಸಿಕೊಳ್ಳುವುದರಿಂದ ಈ ಸಮಾಜಕ್ಕೆ ಸದೃಡವಾದ ನಾಗರಿಕರನ್ನಾಗಿ ಮಾಡಬಹುದು ಎಂದರು.
5ನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಮೌಲ್ಯಯುಕ್ತ ಆಟಗಳು, ಹಾಡುಗಳು, ಶ್ಲೋಕಗಳ ಕಂಠಪಾಠ, ಜ್ಞಾಪಕ ಶಕ್ತಿ, ಏಕಾಗ್ರತೆ, ದೃಢತೆ, ಇಚ್ಛಾಶಕ್ತಿಯನ್ನು ವೃದ್ಧಿ ಮಾಡಿಕೊಳ್ಳುವುದು ಮತ್ತು ರಾಜಯೋಗ ಧ್ಯಾನದ ಬಗ್ಗೆ ತರಬೇತಿ ನೀಡಲಾಯಿತು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಯಿತು. ಡಾ. ವೈಶಾಲಿ ಬಿರಾದಾರ, ಕೆ.ಸಿ. ಹಿರೇಮಠ, ಸಿದ್ದಪ್ಪ ಚಬ್ಬರಭಾವಿ ಸೇರಿದಂತೆ ದೈವಿ ಪರಿವಾರದವರು ಉಪಸ್ಥಿತರಿದ್ದರು.