ಚೆನ್ನೈ: ನಟ ರಜನೀಕಾಂತ್ ಅವರು ಮತ್ತೊಮ್ಮೆ ತಮ್ಮ ಮಾನವೀಯತೆಯ ಮೂಲಕ ಜನಮನ ಗೆದ್ದಿದ್ದಾರೆ. ಮಧುರೈ ಮೂಲದ ರಸ್ತೆ ಬದಿ ವ್ಯಾಪಾರಿ ಶೇಖರ್ ಅವರನ್ನು ಕುಟುಂಬ ಸಮೇತ ತಮ್ಮ ನಿವಾಸಕ್ಕೆ ಆಹ್ವಾನಿಸಿ ಗೌರವಿಸಿದ ಘಟನೆ ಇದೀಗ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಶೇಖರ್ ಕಳೆದ 15 ವರ್ಷಗಳಿಂದಲೂ ಕೇವಲ 5 ರೂಪಾಯಿಗೆ ಪರೋಟ ಮಾರಾಟ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ರಸ್ತೆ ಬದಿ ಹೋಟೆಲ್ಗಳಲ್ಲಿ ಪರೋಟ ಬೆಲೆ 30ರಿಂದ 50 ರೂಪಾಯಿ ಇದ್ದರೂ, ಶೇಖರ್ ಮಾತ್ರ ಬೆಲೆ ಏರಿಸದೇ ಸೇವಾ ಮನೋಭಾವದಿಂದ ವ್ಯಾಪಾರ ನಡೆಸುತ್ತಿದ್ದಾರೆ. ಈ ಕಾರ್ಯವೇ ರಜನೀಕಾಂತ್ ಗಮನ ಸೆಳೆದಿದೆ.
ಶೇಖರ್ ಅವರನ್ನು ಮನೆಗೆ ಕರೆಸಿದ ರಜನೀಕಾಂತ್, ಆತಿಥ್ಯ ನೀಡಿ, ಚಿನ್ನದ ಚೈನ್ ನೀಡುವ ಮೂಲಕ ಸನ್ಮಾನ ಮಾಡಿದ್ದಾರೆ. ಜೊತೆಗೆ ಶೇಖರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಲಾಗಿದೆ ಎನ್ನಲಾಗಿದೆ.
ಶೇಖರ್ ರಜನೀಕಾಂತ್ ಅವರ ಅಪ್ಪಟ ಅಭಿಮಾನಿ. ರಜನೀಕಾಂತ್ ಹುಟ್ಟುಹಬ್ಬದ ನೆನಪಿಗಾಗಿ 5 ರೂಪಾಯಿ ಪರೋಟ ಮಾರಾಟ ಆರಂಭಿಸಿದ್ದ ಶೇಖರ್, ತಮ್ಮ ಹೋಟೆಲಿನಲ್ಲಿ ನಟನ ಫೋಟೋಗಳನ್ನು ಅಳವಡಿಸಿಕೊಂಡಿದ್ದು, ಕೈ ಮೇಲೆ ಟ್ಯಾಟೂ ಕೂಡ ಹಾಕಿಸಿಕೊಂಡಿದ್ದಾರೆ.
ಈ ಘಟನೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಜನೀಕಾಂತ್ ಅವರ ವ್ಯಕ್ತಿತ್ವಕ್ಕೆ ಜನರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.



