ವಿಜಯಸಾಕ್ಷಿ ಸುದ್ದಿ, ಗದಗ: ನೆಲದನುಡಿ ಟ್ರಸ್ಟ್ ಆಶ್ರಯದಲ್ಲಿ ಸಾಕ್ರೇಡ್ ಎನ್‌ಲೈಟ್ ಅಕಾಡೆಮಿಯಿಂದ ಮೂರನೇ ಕಣ್ಣಿನ ಕಲೆ ಕುರಿತು, ಆರನೇ ಇಂದ್ರಿಯದ ಬಗ್ಗೆ 5ರಿಂದ 16 ವರ್ಷದ ವಯಸ್ಸಿನವರಿಗೆ ನಗರದಲ್ಲಿ ಉಚಿತ ಡೆಮೋ (ಪ್ರದರ್ಶನ) ಶಿಬಿರವನ್ನು ಜುಲೈ 27ರಂದು ಏರ್ಪಡಿಸಲಾಗಿದೆ ಎಂದು ಋಷಿಕೇಶ ಗುರುಕುಲಂ ಟ್ರಸ್ಟ್ ಅಧ್ಯಕ್ಷರಾದ ಸುರೇಶಕುಮಾರ ಗುರೂಜಿ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಶನಿವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಕ್ಕಳಿಗೆ ಕಣ್ಣು ಮುಚ್ಚಿಸಿ ಕಣ್ಣಿನ ಮೇಲೆ ಪಟ್ಟಿ ಕಟ್ಟಿದಾಗಲೂ 6ನೇ ಇಂದ್ರಿಯ, ಥರ್ಡ್ ಐ (ಚಿತ್ತ) ಸಂಯಮ ಶಕ್ತಿಯಿಂದ ಬಣ್ಣ, ವಸ್ತುಗಳನ್ನು, ಉಡುಗೆ-ತೊಡುಗೆಗಳನ್ನು ಗುರುತಿಸುವ, ಓಡುವ, ಓದುವ, ಆಟ ಆಡುವ, ಬರೆಯುವ, ಬಣ್ಣ ಹಾಕುವ, ಚಿತ್ರ ಬಿಡಿಸುವ ಇತ್ಯಾದಿ ಚಟುವಟಿಕೆಗಳನ್ನು ಮಾಡಿ ಧನಾತ್ಮಕ ಸ್ಫೂರ್ತಿಯನ್ನು ಈ ವಿದ್ಯೆಯಿಂದ ಪಡೆದುಕೊಳ್ಳುತ್ತಾರೆ. 5ರಿಂದ 16 ವರ್ಷದ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಈ ಕಾರ್ಯಕ್ರಮ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿದೆ ಎಂದರು.
ನೆಲದನುಡಿ ಟ್ರಸ್ಟ್ ಅಧ್ಯಕ್ಷೆ ರಜಿಯಾಬೇಗಂ ಮಕಾನದಾರ ಮಾತನಾಡಿ, ಈ ವಿದ್ಯೆಯಿಂದ ಮಕ್ಕಳಲ್ಲಿ ಗ್ರಹಿಸುವ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ. ಮಗುವಿನಲ್ಲಿ ದಿವ್ಯದೃಷ್ಟಿ ಜಾಗೃತಗೊಳ್ಳುತ್ತದೆ. ಶೈಕ್ಷಣಿಕ ಬುದ್ಧಿವಂತಿಕೆ ಚುರುಕುಗೊಳ್ಳುತ್ತದೆ. ಅತಿಯಾದ ಮೊಬೈಲ್ ಹಾಗೂ ಟಿವಿ ಬಳಕೆಯನ್ನು ನಿಯಂತ್ರಿಸಬಹುದು. ಮಗುವಿನ ಸುಪ್ತ ಶಕ್ತಿಯ ಸಾಮರ್ಥ್ಯ ಪಾಲಕರ ಗಮನಕ್ಕೂ ಬರುತ್ತದೆ. ಮಕ್ಕಳು ಹೊಸ ಚೈತನ್ಯ, ಉಲ್ಲಾಸ ಹೊಂದುವರು. ಮಕ್ಕಳಲ್ಲಿ ಲವಲವಿಕೆಯ ಚಟುವಟಿಕೆ ಉಂಟಾಗಿ ಸೋಮಾರಿತನ, ಹಠಮಾರಿತನ, ಒರಟುತನ ಕಡಿಮೆಯಾಗುತ್ತದೆ. ಮಕ್ಕಳಲ್ಲಿ ಆಸಕ್ತಿ, ಏಕಾಗ್ರತೆ, ನೆನಪಿನ ಶಕ್ತಿ ಬೆಳೆಯುತ್ತದೆ ಎಂದರು.
ಈ ಪ್ರಕ್ರಿಯೆಗಳಿಂದ ಮಕ್ಕಳಲ್ಲಿ ವಿಶೇಷ ಆಂತರಿಕ ಶಾಂತತೆ ಉಂಟಾಗಿ ಮನಸ್ಸು ಶುದ್ಧಗೊಂಡು, ದೃಷ್ಟಿಕೋನದಲ್ಲಿ ಸ್ಪಷ್ಟತೆ ಉಂಟಾಗುತ್ತದೆ. ಪೋಷಕರಿಗೆ ಮಕ್ಕಳು ಒಂದು ಕಡೆ ಕೂಡುತ್ತಿಲ್ಲ, ಏಕಾಗ್ರತೆಯಿಲ್ಲ ಎನ್ನುವ ಎಲ್ಲಾ ಸಂಕಟಗಳು ಗಣನೀಯವಾಗಿ ದೂರಗೊಳ್ಳುತ್ತವೆ. ಇಂಥ ಸಾಧನೆಯಲ್ಲಿರುವ ಮಕ್ಕಳಿಂದ ಈ ಭಾಗದ ಮಕ್ಕಳಿಗೆ ಇದರ ಉಪಯೋಗ ಲಭಿಸಬೇಕು ಎನ್ನುವ ಕಾರಣಕ್ಕೆ ಡೆಮೊ ಕ್ಲಾಸ್ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಯೋಗಸಾಧಕಿ ರಾಧಾ ಮಾತಾಜಿ, ಶಿಬಿರ ಸಂಚಾಲಕರಾದ ಮಾ ವಜ್ರೇಶ್ವರಿ ಫೌಂಡೇಶನ್ ಅಧ್ಯಕ್ಷೆ ಡಾ. ಸುವರ್ಣಾ ನಿಡಗುಂದಿ, ಪತ್ರಕರ್ತ ವೆಂಕಟೇಶ ಇಮರಾಪೂರ, ತೋಟಯ್ಯ ಗುಡ್ಡಿಮಠ, ಅಲ್ತಾಫ್ ಲಕ್ಷ್ಮೇಶ್ವರ ಮುಂತಾದವರು ಇದ್ದರು.
ಈ ಡೆಮೋ ಶಿಬಿರದಲ್ಲಿ ಪಾಲ್ಗೊಂಡು ಈ ಬಗ್ಗೆ ತಿಳಿದುಕೊಂಡು, ಮಕ್ಕಳ ಭವಿಷ್ಯ ಇನ್ನಷ್ಟು ಉಜ್ವಲಗೊಳ್ಳುವಂತೆ ಮಾಡುವ ದೃಷ್ಟಿಯಿಂದ ಆಸಕ್ತ ಪಾಲಕರು ಹಾಗೂ ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸುವವರು ಮುಂಚಿತವಾಗಿ ಹೆಸರು ನೋಂದಾಯಿಸಬೇಕು.
ನೊಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ನೆಲದನುಡಿ ಟ್ರಸ್ಟ್ ಅಧ್ಯಕ್ಷರಾದ ರಜಿಯಾಬೇಗಂ ಮಕಾನದಾರ ಇವರನ್ನು (ಮೊ-9141102826) ಸಂಪರ್ಕಿಸಬಹುದಾಗಿದೆ.