ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಹಗಲು ಹೊತ್ತಿನಲ್ಲಿ ನಿರಂತರ 7 ತಾಸು 3 ಫೇಸ್ ವಿದ್ಯುತ್ ಪೂರೈಸುವಂತೆ ಲಕ್ಕುಂಡಿ, ಸಂಭಾಪೂರ, ಪಾಪನಾಶಿ ಗ್ರಾಮಗಳ ಕೃಷಿ ಪಂಪ್‌ಸೆಟ್ ಬಳಕೆದಾರ ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು, ಗ್ರಾಮೀಣ ವಿಭಾಗ, ಹುಬ್ಬಳ್ಳಿ ವಿದ್ಯುತ್ ಸರಬರಾಜು ನಿಗಮ ಗದಗ ಇವರಿಗೆ ಮನವಿ ಪತ್ರ ಸಲ್ಲಿಸಿದ ರೈತರು, ಪ್ರಸ್ತುತ ರೈತರ ಐ.ಪಿ ಸೆಟ್‌ಗಳಿಗೆ ಕೇವಲ 5 ತಾಸು 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ನಮಗೆ ನಿರಂತರ 7 ತಾಸು 3 ಫೇಸ್ ವಿದ್ಯುತ್ ಪೂರೈಸುವಂತೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಯಿತು. ರೈತರ ಪ್ರತಿಭಟನೆಗೆ ಮಣಿದ ಸರಕಾರ ರೈತರಿಗೆ ನಿರಂತರ 7 ತಾಸು 3 ಫೇಸ್ ವಿದ್ಯುತ್ ಪೂರೈಸುವಂತೆ ಆದೇಶಿಸಿದ ನಂತರ ಎಲ್ಲಾ ಪೀಡರ್‌ಗಳಿಗೆ ಒಂದೇ ಸಮಯಕ್ಕೆ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪಾಳಿಯಂತೆ ಪೂರೈಸಲು ಒಪ್ಪಲಾಗಿತ್ತು.
ಇದೀಗ ಮತ್ತೆ ರಾತ್ರಿ ಸಮಯದಲ್ಲಿ ವಿದ್ಯುತ್ ಪೂರೈಕೆಯನ್ನು ಮುಂದುವರೆಸಿದ್ದು ರೈತರಿಗೆ ತೊಂದರೆಯಾಗಿದೆ. ಲಕ್ಕುಂಡಿ ಗ್ರಿಡ್‌ನಿಂದ ಪೂರೈಕೆಯಾಗುವ ಎಲ್ಲಾ ಫೀಡರ್‌ಗಳಿಗೂ ಹಗಲು ಹೊತ್ತಿನಲ್ಲಿ ನಿರಂತರ 7 ತಾಸು 3 ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬೀರೇಶ ಪೂಜಾರ, ಗವಿಶಿದ್ದಪ್ಪ ಯಲಿಶಿರುಂಜ, ರಂಗಪ್ಪ ಪೂಜಾರ, ಬಸವರಾಜ ಸೂಟಿ, ಮಾಲಿಂಗಪ್ಪ ಕರಿ, ಬಿ.ಎಂ. ಬಣವಿ, ಮಲ್ಲಪ್ಪ ಬಿಳ್ಯಾಳ, ವೆಂಕಟೇಶ ದೊಂಗಡೆ, ಮಂಜುನಾಥ ಅಬ್ಬಿಗೇರಿ, ಅನಿಲ ಕರಿ, ಶಿವಕುಮಾರ ತಳವಾರ, ಅರುಣ ಮಳೂರು, ಕೃಷ್ಣಪ್ಪ ಹೊಸಮನಿ ಮುಂತಾದವರಿದ್ದರು.


