ವಿಜಯಸಾಕ್ಷಿ ಸುದ್ದಿ, ಗದಗ: ಮಹಿಳಾ ಸಬಲೀಕರಣವು ಸಾಕ್ಷರತೆ, ಶಿಕ್ಷಣ, ತರಬೇತಿ ಮತ್ತು ಜಾಗೃತಿ ಮೂಡಿಸುವ ಮೂಲಕ ಮಹಿಳೆಯರ ಸ್ಥಾನಮಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ನಿಟ್ಟಿನಲ್ಲಿ ಇನ್ನರ್‌ವೀಲ್ ಕ್ಲಬ್ ಗದಗ-ಬೆಟಗೇರಿ ಮಹಿಳೆಯರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿರುವ ಮಹಿಳಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲೆಂದು ಆರಿ ವರ್ಕ್ ಸಾಮಗ್ರಿಗಳನ್ನು ಒದಗಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಸವರಾಜ್ ಮಲ್ಲೂರ ಮಾತನಾಡಿ, ಮಹಿಳೆಯರು ತಮ್ಮ ಸದೃಢ ಭವಿಷ್ಯವನ್ನು ರೂಪಿಸಿಕೊಳ್ಳಲು ತಮ್ಮ ಕಾಲೇಜಿನಲ್ಲಿ ನೀಡುತ್ತಿರುವ ತರಬೇತಿಗಳ ಬಗ್ಗೆ ವಿವರಿಸಿದರು. ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಅಶ್ವಿನಿ ಜಗತಾಪ ಮಾತನಾಡಿ, ಪಡೆದ ತರಬೇತಿಯ ಸದುಪಯೋಗ ಪಡೆದುಕೊಂಡು ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದರು.
ಕಾಲೇಜಿನ ಸುನೀತಾ ಬುರುಡಿ ಸೇರಿದಂತೆ ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ಇನ್ನರ್‌ವೀಲ್ ಕ್ಲಬ್ ಕಾರ್ಯದರ್ಶಿ ಶಿವಲೀಲಾ ಅಕ್ಕಿ, ಕೋಶಾಧ್ಯಕ್ಷರಾದ ಪುಷ್ಪಾ ಭಂಡಾರಿ, ಸಂಪಾದಕರಾದ ವೀಣಾ ಕಾವೇರಿ, ಸಿಪಿಸಿಸಿ ಮೀನಾಕ್ಷಿ ಕೊರವಣ್ಣವರ್ ಉಪಸ್ಥಿತರಿದ್ದರು.