ವಿಜಯಸಾಕ್ಷಿ ಸುದ್ದಿ, ಮುಂಡರಗಿ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಗತಿಯಲ್ಲಿರುವ ನರೇಗಾ ಸಮುದಾಯ ಬದು ನಿರ್ಮಾಣ ಕಾಮಗಾರಿಗಳಲ್ಲಿ ವಿಶೇಷಚೇತನರು ಹಾಗೂ ವಯೋವೃದ್ಧ ಹಿರಿಯರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸ್ವಾವಲಂಬನೆ ಸಾಧಿಸಿದ್ದಾರೆ.
ಬೇಸಿಗೆ ಬಂದರೆ ಗುಳೆ ಹೋಗುವ ಜನರಿಗೆ ಕೆಲಸ ಕಲ್ಪಿಸಿ ಇದ್ದೂರಲ್ಲೇ ದುಡಿಮೆಗೆ ದಾರಿ ಮಾಡುವ ನರೇಗಾ ಸಮುದಾಯ ಕಾಮಗಾರಿಗಳು ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಆರಂಭವಾಗಿವೆ. ಜೊತೆಗೆ ವಿಶೇಷಚೇತನರಿಗೂ ಮುತುವರ್ಜಿಯಿಂದ ಕೆಲಸ ನೀಡಿ ಸ್ವಾವಲಂಬನೆಗೆ ದಾರಿ ಮಾಡಿಕೊಟ್ಟಿದೆ. ಬಾಗೇವಾಡಿ ಗ್ರಾಮದ 41 ವರ್ಷದ ಹೊನಕೇರಪ್ಪ ಭಕ್ಷಪ್ಪನವರ ಅವರ ಒಂದು ಕಾಲು ಮೊದಲಿನಿಂದಲೂ ಊನವಾಗಿದ್ದು, ನರೇಗಾ ಯೋಜನೆಯ ಕಾಮಗಾರಿಯಲ್ಲಿ ಕೂಲಿಕಾರರಿಗೆ ನೀರು ಕೊಡುವುದರ ಜೊತೆಗೆ ಪಡ ಕಡಿಯುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಆ ಮೂಲಕ ಹಳ್ಳಿಗಳ ಅಭ್ಯುದಯದ ಕನಸು ಹೊಂದಿರುವ ನರೇಗಾ ಯೋಜನೆಯಲ್ಲಿ ಭಾಗವಹಿಸಿ ಗರ್ಭಿಣಿಯರು, ಅಂಗವಿಕಲರು ಹಾಗೂ ವೃದ್ಧರಿಗಾಗಿ ಇರುವ ಅರ್ಧ ಕೆಲಸ ಪೂರ್ಣ ಕೂಲಿ ನಿಯಮವನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಕಾಲು ಊನ ಇರುವುದರಿಂದ ಇತರೆ ಜನರ ಜಮೀನು ಹಾಗೂ ದಿನಗೂಲಿ ಕೆಲಸ ಸಿಗುವುದು ಕಡಿಮೆ. ಆದರೆ ನರೇಗಾ ಯೋಜನೆಯ ಮೂಲಕ ಆ ಕೊರತೆ ನೀಗಿ ಉತ್ತಮ ಕೂಲಿ ಮೊತ್ತ ಪಾವತಿಯಾಗುತ್ತಿದೆ ಎನ್ನುತ್ತಾರೆ ಅವರು.
ಹೊನಕೇರಪ್ಪ ಅವರು ನರೇಗಾ ಯೋಜನೆಯನ್ನು ಹೀಗೆ ಸದುಪಯೋಗಪಡಿಸಿಕೊಂಡರೆ, ಬಿದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡವಾಡ ಗ್ರಾಮದ 45 ವರ್ಷದ ಅಶೋಕ ವಿರೂಪಾಕ್ಷಪ್ಪ ಕೊಂಚಿಗೇರಿ ಅವರ ಬಲಗಾಲು ಸಹ ಹುಟ್ಟಿನಿಂದ ಪೊಲಿಯೋ ಕಾರಣಕ್ಕೆ ಊನವಾಗಿದೆ. ಖಾಸಗಿ ವ್ಯಕ್ತಿಗಳ ಬಳಿ ಅವರಿಗೂ ಕೂಲಿ ಕೆಲಸ ಸಿಗುವುದು ದುಸ್ತರ. ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ನರೇಗಾ ಯೋಜನೆಯಡಿ ಸಕ್ರಿಯರಾಗಿ ಸಮುದಾಯ ಕಾಮಗಾರಿಯಲ್ಲಿ ಭಾಗವಹಿಸಿರುವ ಅವರು ಅರ್ಧ ಕೆಲಸ ಪೂರ್ಣ ಕೂಲಿ ನಿಯಮದಿಂದ ದಿನವೊಂದಕ್ಕೆ 370 ರೂಪಾಯಿ ಕೂಲಿ ಪಡೆಯುತ್ತಿದ್ದಾರೆ. ಇದರಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯವಾಗಿದ್ದು, ಮನೆಯ ಸ್ಥಿತಿ ಸುಧಾರಣೆಗೆ ಕಾರಣವಾಗಿದೆ ಎನ್ನುವುದು ಯೋಜನೆಯ ಕುರಿತು ಅವರ ಖುಷಿಯ ಮಾತು.
ಮುಂಡವಾಡ ಗ್ರಾಮದ ಸಮುದಾಯ ಬದು ಕಾಮಗಾರಿಯಲ್ಲಿ ಭಾಗವಹಿಸಿರುವ 40 ವರ್ಷದ ಹಾಲವ್ವ ದುರಗಪ್ಪ ಹರಿಜನ ಹುಟ್ಟಿನಿಂದಲೇ ವಿಶೇಷಚೇತನ ಮಹಿಳೆ. ಎಡಗೈ ಮಣಿಕಟ್ಟು ಮುಷ್ಟಿ ಸಮಸ್ಯೆಯಿಂದ ಕುಗ್ಗದ ಇವರು ನರೇಗಾ ಯೋಜನೆಯಡಿ ಕೂಲಿ ಕೆಲಸಕ್ಕೆ ಗ್ರಾ.ಪಂ ಮೂಲಕ ಹೆಸರು ನೋಂದಾಯಿಸಿಕೊಂಡು ಒಂದೇ ಕೈಯಲ್ಲಿ ಬುಟ್ಟಿಗೆ ಮಣ್ಣಿನ ಹೆಂಡೆಗಳನ್ನು ತುಂಬುವ ಮೂಲಕ ನರೇಗಾ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. `ನರೇಗಾದಾಗ ಭಾಗವಹಿಸಿದ್ರ ಬರೋ ಕೂಲಿ ಅನುಕೂಲ ಆಗತ್ರಿ. ಅದರಾಗು ಈಗ ಕೂಲಿ 370 ರೂಪಾಯಿ ಆಗಿರಾದ್ರಿಂದ ಭಾಳ ಖುಷಿಯಾಗೇತ್ರಿ. ಅದಕ ಬದು ಕೆಲಸದಾಗ ತಪ್ಪದ ಭಾಗವಹಿಸಿನ್ರಿ’ ಎನ್ನುವುದು ಹಾಲವ್ವ ಅವರ ಮಾತು.
“ನ್ಯೂನ್ಯತೆಯನ್ನು ಲೆಕ್ಕಿಸದೆ ಈ ಮೂವರು ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿರುವುದು ಮಾದರಿಯಾಗಿದೆ. ಗ್ರಾ.ಪಂ ಮಟ್ಟದಲ್ಲಿ ವಿಶೇಷಚೇತನರು ಹಾಗೂ ಮಹಿಳೆಯರು ಹೆಚ್ಚೆಚ್ಚು ಭಾಗವಹಿಸುವಂತೆ ಮಾಡಲು ಅಗತ್ಯ ಐಇಸಿ ಚಟುವಟಿಕೆಗಳನ್ನು ತಾಲೂಕಿನ ಗ್ರಾ.ಪಂಗಳಲ್ಲಿ ಹಮ್ಮಿಕೊಂಡಿದ್ದೆವು. ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ನರೇಗಾ ಯೋಜನೆಯ ಆಶಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಿಳಿಸಿ ಸಮರ್ಪಕ ಅನುಷ್ಠಾನಕ್ಕಾಗಿ ಶ್ರಮಿಸಲಿದ್ದೇವೆ”
– ವಿಶ್ವನಾಥ ಹೊಸಮನಿ.
ಮುಂಡರಗಿ ತಾ.ಪಂ ಇಓ.