ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿರಹಟ್ಟಿ ಪಟ್ಟಣದಲ್ಲಿ ಪ್ರಾರಂಭವಾಗಿರುವ ದಸ್ತು ಬರಹಗಾರರ ಅನಿರ್ದಿಷ್ಟ ಪ್ರತಿಭಟನಾ ಸ್ಥಳಕ್ಕೆ ಹಿಂದೂ ಸಂಘಟನೆಗಳ ಒಕ್ಕೂಟದ ಮುಖಂಡ ರಾಜು ಖಾನಪ್ಪನವರ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಆಗಮಿಸಿ ತಮ್ಮ ಬೆಂಬಲವನ್ನು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ಖಾನಪ್ಪನವರ, ಹಲವು ವರ್ಷಗಳಿಂದ ದಸ್ತು ಬರಹಗಾರರು ಬಹಳ ಕಷ್ಟದಲ್ಲಿಯೇ ತಮ್ಮ ವೃತ್ತಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಸರಕಾರ ಡಿಜಿಟಲೀಕರಣದ ನೆಪದಲ್ಲಿ ದಸ್ತು ಬರಹಗಾರರ ಕುಟುಂಬಗಳು ಬೀದಿಗೆ ಬರುವಂತಹ ಕೆಲಸ ಮಾಡುತ್ತಿರುವುದು ವಿಷಾದನೀಯ. ಈ ಕೂಡಲೇ ಹೊರ ರಾಜ್ಯದಲ್ಲಿರುವಂತೆ ನಮ್ಮ ರಾಜ್ಯದಲ್ಲೂ ಸಹ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು, ನೋಂದಣಿ ಆಗುವ ಎಲ್ಲಾ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಅಥವಾ ವಕೀಲ ಬಿಕ್ಕಲಂ ಕಡ್ಡಾಯಗೊಳಿಸಬೇಕು, ಪತ್ರ ಬರಹಗಾರರಿಗೆ ಗುರುತಿನ ಚೀಟಿಯನ್ನು ನೀಡಬೇಕು ಹಾಗೂ ದಸ್ತು ಬರಹಗಾರರಿಗೆ ಸೇವಾ ಭದ್ರತೆಯನ್ನು ಒದಗಿಸಬೇಕೆಂದು ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಮನವಿ ಮೂಲಕ ಒತ್ತಾಯ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಲಕ್ಕುಂಡಿ, ಶಂಕರ ಮರಾಠೆ, ಫಕ್ಕೀರೇಶ ರಟ್ಟಿಹಳ್ಳಿ, ವಿಠ್ಠಲ ಬಿಡವೆ, ನಂದಾ ಪಲ್ಲೇದ, ಶಿವು ಲಮಾಣಿ, ಪರಶುರಾಮ ಡೊಂಕಬಳ್ಳಿ, ಸಂಘದ ತಾಲೂಕಾಧ್ಯಕ್ಷ ಅಶೋಕ ಹುಬ್ಬಳ್ಳಿ, ಉಪಾಧ್ಯಕ್ಷ ಶಿವಬಸಪ್ಪ ದಶಮನಿ, ನಜೀರ ಡಂಬಳ, ಶಂಕರ ಕೂಸ್ಲಾಪೂರ, ಮೋಹನ ಹೊಂಬಾಳಿ, ಮಂಜುನಾಥ ಮೆಣಸಿನಕಾಯಿ, ಮೈನು ಅತ್ತಾರ, ಪದ್ಮಾವತಿ ಹುಬ್ಬಳ್ಳಿ, ಸುಧಾ ಕೂಸ್ಲಾಪೂರ, ಮಂಜು ಹುಬ್ಬಳ್ಳಿ, ಚನ್ನಪ್ಪ ಕುರಿ, ಪವನ ಹುಬ್ಬಳ್ಳಿ, ಮಹಾದೇವಪ್ಪ ಪಲ್ಲೇದ, ಮಹಾದೇವಪ್ಪ ಹೊಂಬಾಳಿ ಮುಂತಾದವರು ಉಪಸ್ಥಿತರಿದ್ದರು.



