ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ನಗರಕ್ಕೆ ಹೊಂದಿಕೊಂಡು 10.5 ಎಂಟಿಪಿಎಸ್ ಸಾಮರ್ಥ್ಯದ ಕಾರ್ಖಾನೆ ವಿಸ್ತರಣೆ ಮಾಡಲು ಮುಂದಾದ ಬಲ್ಡೋಟ ಬಿಎಸ್ಪಿಎಲ್ ಮತ್ತು ಇತರೆ ಕಾರ್ಖಾನೆಗಳನ್ನು ವಿರೋಧಿಸಿ ಧರಣಿ ಹಮ್ಮಿಕೊಂಡಿರುವ ಸತ್ಯಾಗ್ರಹದ 18ನೇ ದಿನದ ಹೋರಾಟದಲ್ಲಿ ಗದುಗಿನ ತೋಂಟದ ಸಿದ್ದಲಿಂಗ ಮಠದ ಶ್ರೀ ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳವರು ಪಾಲ್ಗೊಂಡು ಬೆಂಬಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಧರಣಿಗೆ ಬರುವ ಮೊದಲು ಬಾಧಿತ ಪ್ರದೇಶದ ಹಲವು ಗ್ರಾಮಗಳ ದುಸ್ಥಿತಿ ವೀಕ್ಷಿಸಿ, ಅಲ್ಲಿನ ಜನರ, ರೈತರ ಮತ್ತು ಮಕ್ಕಳ ಜೊತೆ ಮಾತನಾಡಿ ತಮ್ಮ ಅನುಭವ ಹಂಚಿಕೊಟ್ಟರು. ಅಲ್ಲಿ ಬೇರೆಯದ್ದೇ ಒಂದು ಲೋಕ ಸೃಷ್ಟಿ ಆಗಿದೆ. ಅಲ್ಲಿನ ಹಳ್ಳಿಗಳನ್ನೇ ಬೇರೆಡೆ ಸ್ಥಳಾಂತರಿಸುವಷ್ಟು ತೊಂದರೆ ಇದೆ. 20 ವರ್ಷ ಅವರು ಅನುಭವಿಸಿದ ನೋವಿಗೆ ಯಾವ ಮುಲಾಮು ಇಲ್ಲ. ಈ ಕಾರ್ಖಾನೆ ಇಲ್ಲಿ ಅವಶ್ಯಕವೂ ಇಲ್ಲವಾದ್ದರಿಂದ ಈ ಹೋರಾಟ ಒಂದು ಬೃಹತ್ ಜನಾಂದೋಲವಾಗಬೇಕು. ಅದಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹೋರಾಟವನ್ನು ವಿಸ್ತರಿಸಲು ಬೇಕಾದ ವ್ಯವಸ್ಥೆ ಮಾಡಿಕೊಡುವ ಜೊತೆಗೆ ರಾಜ್ಯದ ನೂರಾರು ಮಠಾಧೀಶರ ಬೆಂಬಲವನ್ನೂ ಕೊಡಿಸುವುದಾಗಿ ಆಶ್ವಾಸನೆ ನೀಡಿದರು.
ಗವಿಮಠದ ಪೂಜ್ಯರು ಇಲ್ಲಿನ ಅತ್ಯಂತ ಪ್ರಭಾವಿಗಳು ಮತ್ತು ಜ್ಞಾನಿಗಳು, ಜನರ ನೋವು ಅರಿತವರು. ಅವರನ್ನೇ ಮುಂದು ಮಾಡಿ ಹೋರಾಟ ಯಶಸ್ವಿಗೊಳಿಸಲು ನಾವು ಸಹ ಅನೇಕ ಮಠಾಧೀಶರ ಜೊತೆಗೆ ಭೇಟಿ ಮಾಡಿ ಮುಂದಾಳತ್ವ ವಹಿಸಿಕೊಳ್ಳುವಂತೆ ಭಿನ್ನವಿಸಿಕೊಳ್ಳುವದಾಗಿ ಹೇಳಿದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಕೊಪ್ಪಳ ಇದರ ಜಂಟಿ ಕ್ರಿಯಾ ವೇದಿಕೆ ಮೂಲಕ ನಡೆಯುತ್ತಿರುವ ಹೋರಾಟಕ್ಕೆ ಈಗಾಗಲೇ ಅನೇಕ ಸಂಘಟನೆಗಳು ಬೆಂಬಲ ನೀಡಿವೆ. 18ನೇ ದಿನ ಕೊಪ್ಪಳ ಜಿಲ್ಲಾ ರೈತ ಮತ್ತು ಕಾರ್ಮಿಕ ರಕ್ಷಣಾ ವೇದಿಕೆ ಸದಸ್ಯರು ಬೆಂಬಲ ನೀಡಿದರು.
ಹೋರಾಟದಲ್ಲಿ ಸಂಚಾಲಕರಾದ ಕೆ.ಬಿ. ಗೋನಾಳ, ಡಿ.ಹೆಚ್. ಪೂಜಾರ, ಮಂಜುನಾಥ ಜಿ.ಗೊಂಡಬಾಳ, ಸಾಹಿತಿ ಡಿ.ಎಂ. ಬಡಿಗೇರ, ಮೂಕಪ್ಪ ಮೇಸ್ತಿಬಾಸಾಪುರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಜ್ಯೋತಿ ಎಂ.ಗೊಡಬಾಳ, ಬಸವರಾಜ ಬಳ್ಳೊಳ್ಳಿ, ಗವಿದ್ದಪ್ಪ ಕೊಪ್ಪಳ, ಪುಷ್ಪಲತಾ ಏಳುಬಾವಿ, ಮಾಲಾ ಬಡಿಗೇರ, ಶಾಂತಯ್ಯ ಅಂಗಡಿ, ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಎಂ.ಎಸ್. ಘಂಟಿ, ಕಾಶಪ್ಪ ಛಲವಾದಿ, ಭೀಮಸೇನ ಕಲಿಕೇರಿ, ಮಖಬೂಲ್ ರಾಯಚೂರು, ಮಹಾದೇವಪ್ಪ ಎಸ್.ಮಾವಿನಮಡು, ಮುದುಕಪ್ಪ ಹೊಸಮನಿ ಮುಂತಾದವರಿದ್ದರು.
ಕಾರ್ಖಾನೆ ವಿರೋಧಿ ಹೋರಾಟದ ಪ್ರಮುಖರಾದ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸರಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಹೊಂದದ ಕಾರಣ, ಪರಿಸರ ವಿರೋಧಿ ಹಾಗೂ ಜನರ ಹೋರಾಟವನ್ನು ಗಮನಿಸದೆ ಇರುವದು ನೋವು ತಂದಿದೆ. ಬಾಧಿತ ಪ್ರದೇಶಕ್ಕೆ ಭೇಟಿ ನೀಡದ, ಪ್ರತಿಭಟನೆ ಗಮನಿಸದ, ಜನರ ಕೂಗು ಕೇಳದ ಸರಕಾರಗಳ ಇಂತಹ ಧೋರಣೆಗಳೇ ಪ್ರತ್ಯೇಕ ರಾಜ್ಯದ ಕೂಗಿಗೆ ಪುಷ್ಟಿ ನೀಡುತ್ತವೆ ಎಂದು ಗುಡುಗಿದರು.


