ನವದೆಹಲಿ: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಪ್ರಸಿದ್ಧ ಶ್ರೀ ಮಹಾಕಾಳೇಶ್ವರ ದೇವಾಲಯದ ಗರ್ಭಗುಡಿಗೆ ವಿಐಪಿ ದರ್ಶನ ನೀಡುವ ವ್ಯವಸ್ಥೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಧಾರ್ಮಿಕ ವಿಚಾರಗಳನ್ನು ನಿಯಂತ್ರಿಸುವುದು ನ್ಯಾಯಾಲಯದ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದ ನ್ಯಾಯಾಲಯ, ಈ ರೀತಿಯ ನಿರ್ಧಾರಗಳನ್ನು ದೇವಾಲಯದ ಆಡಳಿತ ಮಂಡಳಿಯೇ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ಅರ್ಜಿಯ ವಿಚಾರಣೆಯನ್ನು ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ, ಅರ್ಜಿದಾರ ದರ್ಪಣ್ ಅವಸ್ಥಿ ಅವರಿಗೆ ಈ ವಿಚಾರದಲ್ಲಿ ದೇವಾಲಯ ಪ್ರಾಧಿಕಾರದ ಮುಂದೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವಂತೆ ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿಷ್ಣು ಶಂಕರ್ ಜೈನ್, ದೇವಾಲಯದ ಗರ್ಭಗುಡಿ ಪ್ರವೇಶದ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನನ್ನೂ ಸಮಾನವಾಗಿ ಪರಿಗಣಿಸಬೇಕು ಎಂದು ವಾದಿಸಿದರು. ವಿಐಪಿ ಸ್ಥಾನಮಾನ ಆಧಾರದ ಮೇಲೆ ತಾರತಮ್ಯ ಮಾಡಲಾಗುವುದಿಲ್ಲ. ಎಲ್ಲರಿಗೂ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಅಥವಾ ಎಲ್ಲರಿಗೂ ಸಮಾನ ಪ್ರವೇಶ ನೀಡಬೇಕು ಎಂದು ಅವರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ದೇವಾಲಯದ ಗರ್ಭಗುಡಿಯೊಳಗೆ ಸಂವಿಧಾನದ ಕಲಂ 14 (ಸಮಾನತೆಯ ಹಕ್ಕು) ಅನ್ವಯಿಸುತ್ತದೆ ಎಂದು ಒಪ್ಪಿಕೊಂಡರೆ, ಕಲಂ 19 (ವಾಕ್ಸ್ವಾತಂತ್ರ್ಯ) ಸೇರಿದಂತೆ ಇತರ ಮೂಲಭೂತ ಹಕ್ಕುಗಳನ್ನೂ ಅಲ್ಲಿ ಅನ್ವಯಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು.
“ಮೊದಲು ಇತರರು ಪ್ರವೇಶಿಸುತ್ತಿರುವುದರಿಂದ ನನಗೂ ಪ್ರವೇಶಿಸುವ ಹಕ್ಕು ಇದೆ ಎಂದು ನೀವು ಹೇಳುತ್ತೀರಿ. ನಂತರ ಮಾತನಾಡುವ ಹಕ್ಕಿನ ಆಧಾರದ ಮೇಲೆ ಮಂತ್ರಗಳನ್ನು ಪಠಿಸುವ ಹಕ್ಕನ್ನೂ ಬೇಡಿಕೊಳ್ಳುತ್ತೀರಿ. ಹೀಗೆ ಎಲ್ಲಾ ಮೂಲಭೂತ ಹಕ್ಕುಗಳನ್ನು ಗರ್ಭಗುಡಿಯೊಳಗೆ ವಿಸ್ತರಿಸಬೇಕಾದ ಸ್ಥಿತಿ ಬರಬಹುದು” ಎಂದು ಪೀಠ ಸ್ಪಷ್ಟಪಡಿಸಿತು.
ಈ ಹಿಂದೆ ಹೈಕೋರ್ಟ್ ಕೂಡ, ‘ವಿಐಪಿ’ ಎಂಬ ಪದವನ್ನು ಯಾವುದೇ ಕಾಯ್ದೆ ಅಥವಾ ನಿಯಮದಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿಲ್ಲ. ಇದು ದೇವಾಲಯ ನಿರ್ವಹಣಾ ಸಮಿತಿ ಹಾಗೂ ಜಿಲ್ಲಾಧಿಕಾರಿಗಳ ಆಡಳಿತಾತ್ಮಕ ವಿವೇಚನೆಗೆ ಒಳಪಟ್ಟ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.



