ಬೆಂಗಳೂರು/ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ನಾಮಪತ್ರ ಸಲ್ಲಿಕೆ ವೇಳೆ ಸಂಪೂರ್ಣ ಆಸ್ತಿ ವಿವರಗಳನ್ನು ಘೋಷಣೆ ಮಾಡಿಲ್ಲ ಹಾಗೂ ಕ್ರಿಮಿನಲ್ ಪ್ರಕರಣಗಳ ಮಾಹಿತಿಯನ್ನು ಮರೆಮಾಚಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಮುನಿರಾಜು ಅವರು 2023ರ ಜೂನ್ 24ರಂದು ಕರ್ನಾಟಕ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆ ವೇಳೆ ಆಸ್ತಿ ಮಾಹಿತಿಯನ್ನು ಸರಿಯಾಗಿ ಬಹಿರಂಗಪಡಿಸದಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಹೈಕೋರ್ಟ್ ಎಸ್.ಎನ್. ಸುಬ್ಬಾರೆಡ್ಡಿ ಅವರ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿ ಆದೇಶ ಹೊರಡಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಎಸ್.ಎನ್. ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಸಿಜೆಐ ಸೂರ್ಯಕಾಂತ್ ನೇತೃತ್ವದ ಪೀಠವು ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆ ನೀಡಿ, ಸೆಪ್ಟೆಂಬರ್ 7ಕ್ಕೆ ವಿಚಾರಣೆ ಮುಂದೂಡಿದೆ.
ಇದೇ ವೇಳೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ ಹಿನ್ನೆಲೆ, ಮುಂದಿನ ವಿಚಾರಣೆವರೆಗೆ ಎಸ್.ಎನ್. ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿ ಶಾಸಕರಾಗಿ ಮುಂದುವರಿಯಲಿದ್ದಾರೆ.



