ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಸಹಸ್ರಕೋಟಿ ಮೂವಿ ಎಂಟರ್‌ಟೈನ್‌ಮೆಂಟ್ ಅರ್ಪಿಸುವ ‘ಸುಳಿ’ ಕನ್ನಡ ಚಲನಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಸಮಾರಂಭ ಬೆಂಗಳೂರು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಸಾಹಿತಿ ಮತ್ತು ಮಾಜಿ ಸಚಿವರಾದ ಬಿ.ಟಿ. ಲಲಿತಾ ನಾಯಕ್, ಹಿರಿಯ ನಟಿ ಭವ್ಯ, ಹಾಗೂ ನಟ ಸುಚೇಂದ್ರ ಪ್ರಸಾದ್ ಆಗಮಿಸಿ, ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಹೇಳಿದರು. ಮಹಿಳಾ ನಿರ್ದೇಶಕಿ ರಶ್ಮಿ ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಶ್ರೀ ಕಬ್ಬಾಳಮ್ಮನ ಮಹಿಮೆ, ಮನೆ, ಬ್ಯಾಂಕ್ ಲೋನ್, ಸುಮ ಚಿತ್ರದ ನಿರ್ದೇಶಕರಾದ ರಶ್ಮಿ ಎಸ್ ಅವರು ಈ ಚಿತ್ರದ ನಿರ್ದೇಶನ ಮಾಡಿದ್ದು, ಇದು ಪವಳಕಾಯಿ ಕಾದಂಬರಿ ಆಧಾರಿತ ಚಿತ್ರವಾಗಿದೆ. ಮೂಲ ಚಿನ್ನಪ್ಪ ಭಾರತಿಯವರು ಬರೆದಿರುವ ತಮಿಳಿನ ಪವಳಾಯಿ, ಮತ್ತು ಕನ್ನಡಕ್ಕೆ ಅದೇ ಹೆಸರಿನಲ್ಲಿ ಡಾ. ಕೆ. ಪದ್ಮನಾಭ ಉಡುಪ ಅನುವಾದಿಸಿದ್ದಾರೆ. ಈ ಚಿತ್ರದ ಕಥೆಯು 1970ನೇ ಇಸವಿಯಲ್ಲಿ ನಡೆಯುವ ಕಥಾ ಹಂದರ ಹೊಂದಿದ್ದು, ಇಡೀ ಚಿತ್ರದ ಕಥೆಯು ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತದೆ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯು ಜೀವನವೆಂಬ ಸುಳಿಯಲ್ಲಿ ಸಿಲುಕಿದ ಮೇಲೆ ಅದೆಲ್ಲ ಸುಳಿಗಳಿಂದ ಹೇಗೆ ಮುಕ್ತಿ ಪಡೆಯುತ್ತಾನೆ, ಹೇಗೆ ಎಲ್ಲಾ ಸಂಬಂಧಗಳನ್ನು ನಿಭಾಯಿಸುತ್ತಾನೆ ಎಂಬುದೇ ಚಿತ್ರದ ಕಥಾಹಂದರವಾಗಿದೆ.
ವಿಕ್ರಂ ಯೋಗಾನಂದ್, ದೇವೂ ಛಾಯಾಗ್ರಹಣ, ಮುತ್ತುರಾಜ ಟಿ ಸಂಕಲನ, ಸತೀಶ್ ಜೋಶಿ ಹಾವೇರಿ ಸಾಹಿತ್ಯ, ಆರಾಧ್ಯ ಮುತ್ತುರಾಜು ಟಿ ಸಂಭಾಷಣೆ, ಪತ್ರಿಕಾ ಸಂಪರ್ಕ ಕಾರ್ತಿಕ್ ಸುಧನ್, ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಿಗಿ, ಪ್ರಚಾರಕಲೆ ದೇವೂ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ.ಪಿ ಅವರದ್ದಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕಹೊಸಗಾವಿಯ ಬೆಟ್ಟಸ್ವಾಮಿ ಗೌಡರವರು (ಬಿಎಸ್‌ಗೌಡ) ಚಿತ್ರದ ನಿರ್ಮಾಪಕರಾಗಿದ್ದಾರೆ. ಇದೇ ತಿಂಗಳು ನಡೆಯಲಿರುವ ಮೈಸೂರು ದಸರಾ ಚಲನಚಿತ್ರೋತ್ಸವ-2025ಕ್ಕೆ ‘ಸುಳಿ’ ಚಿತ್ರ ಆಯ್ಕೆಯಾಗಿರುವುದು ಚಿತ್ರ ತಂಡಕ್ಕೆ ಖುಷಿ ತಂದಿದೆ ಎಂದು ನಿರ್ದೇಶಕಿ ರಶ್ಮಿ ಎಸ್ ಹೇಳಿದರು.
ಚಿತ್ರದಲ್ಲಿ ಕಲಾವಿದರಾದ ಸನತ್, ಚೈತ್ರ, ಪಿ. ಸಂಜನಾ ನಾಯ್ಡು, ಶಿವಕುಮಾರ್ ಆರಾಧ್ಯ, ಶಂಕರ್ ನಾರಾಯಣ್, ಕಾವ್ಯ ಪ್ರಕಾಶ್, ಮಂಡ್ಯ ಸಿದ್ದು, ಹರಿಹರನ್ ಬಿ.ಪಿ ಮೊದಲಾದವರ ತಾರಾಗಣವಿದೆ. ಮಂಡ್ಯ, ಮದ್ದೂರು, ರಾಮನಗರದ ಸುತ್ತಮುತ್ತ ಒಟ್ಟು 25 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಎರಡು ಹಾಡುಗಳಿದ್ದು, ಎನ್. ರಾಜು ಸಂಗೀತ ನಿರ್ದೇಶನ, ಹಿನ್ನೆಲೆ ಸಂಗೀತ ಶಿವಸತ್ಯ ಅವರದಿದೆ.