ನಡೆ-ನುಡಿ ಒಂದಾದಾಗ ಶರಣನಾಗಲು ಸಾಧ್ಯ: ಗಿರಿಜಕ್ಕ ಧರ್ಮರೆಡ್ಡಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾವು ಸಾಮಾನ್ಯವಾಗಿ ವ್ಯಕ್ತಿಗಳಿಗೆ ಗೌರವಯುತವಾಗಿ ಕರೆಯಲು `ಶರಣ’ನೆಂಬ ಪದ ಬಳಸುತ್ತೇವೆ. ಅವರನ್ನು `ಶರಣರೆ’ ಎನ್ನುತ್ತೇವೆ. ಆದರೆ ಬಸವಾದಿ ಶರಣರ ವಿಚಾರಧಾರೆಯಲ್ಲಿ ಶರಣರೆಂದರೆ ಬರೀ ಕರೆಯುವ, ಮಾತನಾಡಿಸುವ ಅಲಂಕಾರಿಕ ಪದವಲ್ಲ. ಇಲ್ಲಿ ಶರಣರೆಂದರೆ ಅನುಭಾವಿ, ಆಚಾರವುಳ್ಳವ, ಜ್ಞಾನದ ಅರಿವನ್ನು ಹೊಂದಿರುವಾತನಾಗಿರುತ್ತಾನೆ. ಶರಣರ ಪ್ರಕಾರ ಹುಟ್ಟಿದ ಮನುಷ್ಯ ಹೇಗೆಂದರೆ ಹಾಗೆ ಬದುಕುವುದಲ್ಲ. ಆತನಿಗೆ ಸಂಸ್ಕಾರ ಮುಖ್ಯವಾಗಿರುತ್ತದೆ ಈ ಸಂಸ್ಕಾರವೇ ಆತನನ್ನು ಹಂತ ಹಂತವಾಗಿ ದೈವತ್ವದ ಕಡೆ ಒಯ್ಯುವುದು ಎಂದು ಶರಣತತ್ವ ಚಿಂತಕಿ ಪೂಜ್ಯ ಗಿರಿಜಕ್ಕ ಧರ್ಮರೆಡ್ಡಿಯವರು ಹೇಳಿದರು.

Advertisement

ಅವರು ಗದಗ ತಾಲೂಕು ಶರಣ ಸಾಹಿತ್ಯ ಪರಿಷತ್ತು, ಗದಗ ತಾಲೂಕಾ ಕದಳಿ ಮಹಿಳಾ ವೇದಿಕೆ ಹಾಗೂ ಬಸವದಳ ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ 1626ನೇ ಶರಣ ಸಂಗಮ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಕೂರಾ ಪಾಂಡುರಂಗ ಕೂರಾ ಈಶ್ವರಪ್ಪ ಶೆಟ್ಟಿ ಇವರ ಹೆಸರಿನಲ್ಲಿ ಪ್ರೊ. ಎಂ. ಬಸವರಾಜ ಮಟಮಾರಿ ನೀಡಿದ ದತ್ತಿ ಕಾರ್ಯಕ್ರಮದಲ್ಲಿ `ಶರಣರ ಜೀವನ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನೇಕ ಶರಣರು ಧರ್ಮಗುರು ಬಸವಣ್ಣನವರು ದೇವರು ಮತ್ತು ಭೂವಿಗೆ ನಿಚ್ಚಣಿಕೆಯಾಗಿದ್ದಾರೆಂದು ತಮ್ಮ ವಚನದಲ್ಲಿ ಹೇಳುತ್ತಾರೆ. ಹಾಗೆಯೇ ಬಸವಣ್ಣನವರು ಕೂಡಾ ಭಕ್ತಿಯ ದಾರಿ ತುಳಿದಾಗ ಮಾತ್ರ ಶರಣ ಮಾರ್ಗ ಲಭಿಸುತ್ತದೆನ್ನುತ್ತಾರೆ. ಇಲ್ಲಿ ಭಕ್ತಿಯೆಂದರೆ ಆಡಂಬರವಲ್ಲ, ಬರೀ ವಿಭೂತಿ, ರುದ್ರಾಕ್ಷಿ ಧಾರಣಿಸಿದ ಪೂಜೆ ಮಾತ್ರವಲ್ಲ. ಆತ ದೇವನಲ್ಲಿ ಅನನ್ಯವಾಗಿ ಪ್ರೀತಿಯಿಡುವುದು. ಅದನ್ನೇ ಶರಣರು ಭಕ್ತಿ ಎನ್ನುವರು. ಅಂದು ಶರಣರು ಶರಣತ್ವದ ಕಟ್ಟಡವನ್ನು ಬರೀ ಕಲ್ಲುಮಣ್ಣಿನಿಂದ ಕಟ್ಟಲಿಲ್ಲ, ದೈವತ್ವ ಪ್ರೀತಿ, ಭಕ್ತಿಯಿಂದ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಇಲ್ಲಿ ಭಕ್ತಿಯ ಮತ್ತೊಂದು ರೂಪವೇ ಪ್ರೇಮವಾಗಿದೆ ಎಂದು ತಿಳಿಸಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆ ರೇಣಕ್ಕ ಕರಿಗೌಡ್ರರವರಿಂದ ಜರುಗಿತು. ಸಭೆಯ ಆರಂಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಪ್ರಧಾನಿ ಡಾ. ಮನಮೋಹನಸಿಂಗರಿಗೆ ಶ್ರದ್ಧಾಂಜಲಿ ಕೋರಲಾಯಿತು. ಸ್ವಾಗತವನ್ನು ಎಸ್.ಎ. ಮುಗದ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿ.ಕೆ. ಕರಿಗೌಡರ ವಹಿಸಿ ಅಧ್ಯಕ್ಷೀಯ ಮಾತಗಳನ್ನಾನಾಡಿದರು. ಗದಗ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗಾರವರು ಚಿತ್ರದುರ್ಗದಲ್ಲಿ ನಡೆಯುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದ ವಿವರ ನೀಡಿ ಭಾಗವಹಿಸಲು ವಿನಂತಿಸಿಕೊAಡರು.

ಕಾರ್ಯಕ್ರಮ ನಿರೂಪಣೆಯನ್ನು ಗದಗ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ ಅಸುಂಡಿ ನಡೆಸಿಕೊಟ್ಟರು. ಗದಗ ತಾಲೂಕ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಸುಲೋಚನಾ ಎಂ.ಐಹೊಳೆ ಶರಣು ಸಮರ್ಪಣೆಗೈದರು.

ಆರಂಭದಲ್ಲಿ ಎನ್.ಎಚ್. ಹಿರೇಸಕ್ಕರಗೌಡ್ರರವರು ಶರಣೆ ಸತ್ಯಕ್ಕನವರ ವಚನಗಳನ್ನು ನಿರ್ವಚನ ಗೈಯ್ಯುತ್ತಾ ಸತ್ಯಕ್ಕನವರು 28 ವಚನಗಳನ್ನು ಬರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹಿರೇಜಂಬರಗಿ ಅವರ ಜನ್ಮಸ್ಥಳವಾಗಿದೆ. ಸತ್ಯಕ್ಕ ತುಂಬ ನಿರ್ಭಿಡೆಯಿಂದ ವಚನ ರಚನೆ ಮಾಡಿದ್ದಾರೆ. ಅವರ ವಚನಗಳಲ್ಲಿ ಏಕದೇವೋಪಾಸನೆ, ದೈವತ್ವದೆಡೆಗೆ ಸಾಗುವುದರ ಬಗ್ಗೆ ತಮ್ಮ ವಚನಗಳಲ್ಲಿ ಹೇಳುತ್ತಾರೆಂದು ಶರಣರ ಬಹಳಷ್ಟು ವಚನಗಳನ್ನು ಉದಾಹರಿಸಿಕೊಂಡು ವಚನಗಳನ್ನು ಬಿಡಿಸಿ ಹೇಳಿದರು.


Spread the love

LEAVE A REPLY

Please enter your comment!
Please enter your name here