ಸೂರ್ಯ ನಮಸ್ಕಾರ ಭಾರತೀಯ ಸಂಸ್ಕೃತಿಯ ಪ್ರತೀಕ

0
santosh
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ಆಚಾರ-ವಿಚಾರ, ನಡೆ-ನುಡಿ, ಆಹಾರ-ವಿಹಾರ ಮತ್ತು ನಿತ್ಯ ಜೀವನ ಕ್ರಮಗಳು ಭಾರತೀಯ ಸಂಸ್ಕೃತಿಯ ಪ್ರತೀಕಗಳಾಗಿವೆ. ಅಂಥವುಗಳಲ್ಲಿ ಸೂರ್ಯನಮಸ್ಕಾರವೂ ಒಂದಾಗಿದೆ.

Advertisement

ಧಾರ್ಮಿಕ ಹಿನ್ನೆಲೆಯಲ್ಲಿ ಸೂರ್ಯನಮಸ್ಕಾರವು ಸೂರ್ಯನಿಗೆ ವಂದನೆ ಸಲ್ಲಿಸುವದಾದರೆ ಆರೋಗ್ಯದ ಹಿನ್ನೆಲೆಯಲ್ಲಿ ಕೆಲವು ಆಸನಗಳನ್ನೊಳಗೊಂಡ ವ್ಯಾಯಾಮ ಪದ್ಧತಿ ಹಾಗೂ ಗರಡಿ ಸಾಧನೆಯಾಗಿದೆ.

ಸೂರ್ಯನಮಸ್ಕಾರವನ್ನು ಋಷಿ-ಮುನಿಗಳು, ಯೋಗ ಸಾಧಕರು, ವ್ಯಾಯಾಮ ಪ್ರಿಯರು ಬಹು ಹಿಂದಿನಿಂದಲೂ ಆಚರಿಸುತ್ತ ಬಂದಿದ್ದಾರೆ. ಈಗಲೂ ಕೆಲವು ಶಾಲೆಗಳಲ್ಲಿ, ಗರಡಿ ಮನೆಗಳಲ್ಲಿ, ಯೋಗ ಕೇಂದ್ರಗಳಲ್ಲಿ ಸೂರ್ಯನಮಸ್ಕಾರ ಆಚರಣೆಯಲ್ಲಿದೆ. ಹೀಗಾಗಿ ಸೂರ್ಯನಮಸ್ಕಾರವು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಡಿ.ಜಿ.ಎಂ. ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಸಂತೋಷ ಬೆಳವಡಿ ತಿಳಿಸಿದರು.

ಶ್ರೀ ಶಿವಾನಂದ ವಿದ್ಯಾವರ್ಧಕ ಸಂಸ್ಥೆಯ ಡಿ.ಜಿ.ಎಂ. ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸ್ವಸ್ಥ ವೃತ್ತ ವಿಭಾಗ ಮತ್ತು ಶಿವಾನಂದ ಯೋಗ ಕಾಲೇಜು ಗದಗ ಇವರ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿ ಪ್ರಯುಕ್ತ ನಡೆಸಿದ ಸೂರ್ಯನಮಸ್ಕಾರ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಂದಿನ ಯುವಜನತೆ ಮತ್ತು ಮಕ್ಕಳಲ್ಲಿ ದೈಹಿಕ ಸಾಮರ್ಥ್ಯ ಕುಂಠಿತಗೊಳ್ಳುತ್ತಲಿದೆ. ಅವರಲ್ಲಿ ದೈಹಿಕ ಶಕ್ತಿ-ಸಾಮರ್ಥ್ಯ ಹೆಚ್ಚಲು ಸೂರ್ಯನಮಸ್ಕಾರ ಸಾಧನೆಯು ಸುಲಭ ಮಾರ್ಗವಾಗಿದೆ. ಈ ಸ್ಪರ್ಧೆ ಅವರಿಗೆ ಹೆಚ್ಚಿನ ಪ್ರೇರಣೆ ನೀಡಲೆಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಫಾರ್ಮಸಿ ಅಧಿಕಾರಿ ದತ್ತಾತ್ರೆಯ ತಿರುಮಲೆ ಮಾತನಾಡಿ, ನಾವು ಆರೋಗ್ಯದಿಂದಿರಲು ಉತ್ತಮ ಆಹಾರ ಸೇವಿಸಬೇಕು, ದುಶ್ಚಟಗಳಿಂದ ದೂರವಿದ್ದು, ನಿತ್ಯ ಸೂರ್ಯನಮಸ್ಕಾರ ವ್ಯಾಯಾಮ ಮಾಡಬೇಕೆಂದು ಸೂಚಿಸಿದರು.

ಸ್ವಸ್ಥ ವೃತ್ತಿ ವಿಭಾಗದ ಮುಖ್ಯಸ್ಥ ಡಾ. ಬೂದೇಶ ಕನಾಜ ಮತ್ತು ಶಿವಾನಂದ ಯೋಗ ಕಾಲೇಜು ಪ್ರಾಚಾರ್ಯ ಎಸ್.ಎಸ್. ಹಿರೇಮಠ ಇವರ ಮಾರ್ಗದರ್ಶನದಲ್ಲಿ ಯೋಗಪಟು ವೆಂಕಟೇಶ ಜಿತೂರಿ ಮತ್ತು ಸುನೀಲ ಹಿರೇಮಠ ಇವರು ಸೂರ್ಯನಮಸ್ಕಾರ ಸ್ಪರ್ಧೆಯ ಸಂಯೋಜಕರಾಗಿ ಹಾಗೂ ನಿತ್ಯಂ ಯೋಗ ಕೇಂದ್ರ ಸಂಚಾಲಕಿ ಸುಮಂಗಲಾ ಹದ್ಲಿ ಮತ್ತು ಗಂಗಾದರ ಕೆಂಗಾರ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.

ಸ್ಪರ್ಧೆಗೂ ಮುನ್ನ ಡಿ.ಜಿ.ಎಂ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲರ ಸಾರಥ್ಯದಲ್ಲಿ ಸೂರ್ಯನಮಸ್ಕಾರ ಯಜ್ಞ ಕಾರ್ಯಕ್ರಮ ಜರುಗಿತು. ಸ್ಪರ್ಧೆಯ ಯಶಸ್ಸಿಗೆ ಮತ್ತು ಸ್ಪರ್ಧಿಗಳ ಪ್ರೋತ್ಸಾಹಕ್ಕಾಗಿ ಪ್ರಾ. ಉಮೇಶ ಅರಹುಣಸಿ, ಡಾ. ಅರುಣ ಸರ್ವಿ, ಅಶೋಕ ಬಾರಕೇರ ಇವರು ಬಹುಮಾನ ಸೇವೆ ಸಲ್ಲಿಸಿದರು.

ಸುನಂದಾ ಜ್ಯಾನೋಪಂತರ ಪ್ರಾರ್ಥನೆ ಹೇಳಿದರು. ಡಾ. ಬೂದೇಶ ಕನಾಜ ಸ್ವಾಗತಿಸಿದರು. ಡಾ. ಸುವರ್ಣ ನಿಡಗುಂದಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಜಿತೂರಿ ವಂದಿಸಿದರು.

ಯೋಗ ಶಿಕ್ಷಕ ಮೋಹನಸಾ ಕಬಾಡಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ಸಶಕ್ತ ಜನಾಂಗ ನಿರ್ಮಾಣಗೊಳ್ಳಲು ಸೂರ್ಯ ನಮಸ್ಕಾರವು ಸಹಕಾರಿಯಾಗಿದೆ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಬಸವ ಯೋಗ ಕೇಂದ್ರದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಮಾತನಾಡಿ, ಯಾವುದೇ ಸ್ಪರ್ಧೆಗಳಿರಲಿ, ಅವು ಸ್ಪರ್ಧಾಳುಗಳಲ್ಲಿ ಹೆಚ್ಚಿನ ಪ್ರೇರಣೆ, ಪ್ರೋತ್ಸಾಹ ನೀಡುವ ಪ್ರಾಯೋಗಿಕ ಗ್ರಂಥಗಳಾಗಿವೆ. ಹೆಚ್ಚಿನ ಸಾಧನೆಗೆ ಪ್ರೇರಕಗಳಾಗಿವೆ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here