ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಅನಾರೋಗ್ಯದ ಕಾರಣ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತನಾಗಿದ್ದ ಸಾಧಿಕ್ ಪಾಷಾ (47) ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಕಳೆದ ಆರು ತಿಂಗಳಿಂದ ಲೋ ಬಿಪಿ, ಹೈ ಶುಗರ್ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಸಾಧಿಕ್ ಪಾಷಾರ ಆರೋಗ್ಯದಲ್ಲಿ ಇತ್ತೀಚೆಗೆ ತೀವ್ರ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆ ಜೈಲು ಅಧಿಕಾರಿಗಳು ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆಬ್ರವರಿ 06ರ ಮಧ್ಯರಾತ್ರಿ ಸಾಧಿಕ್ ಪಾಷಾ ಕೊನೆಯುಸಿರು ಎಳೆದಿದ್ದಾನೆ.
ಸಾಧಿಕ್ ಪಾಷಾ 2020ರಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಿಂದ ಬಂಧಿತನಾಗಿದ್ದ. ಈ ಪ್ರಕರಣದಲ್ಲಿ ಆರು ಮಂದಿ ಆರೋಪಿಗಳನ್ನು ಎನ್ಐಎ ಬಂಧಿಸಿತ್ತು. ಆಗಿನಿಂದಲೂ ಸಾಧಿಕ್ ಪಾಷಾ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿಯೇ ನ್ಯಾಯಾಂಗ ಬಂಧನದಲ್ಲಿದ್ದ.
ಸದ್ಯ ಸಾಧಿಕ್ ಪಾಷಾ ಸಾವಿನ ಕುರಿತು ಜೈಲು ಹಾಗೂ ವಿಕ್ಟೋರಿಯಾ ಆಸ್ಪತ್ರೆ ಅಧಿಕಾರಿಗಳು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಸಾವಿನ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.



