ಜಿಂದಾಲ್ ಕಂಪನಿಯಲ್ಲಿ ಅವ್ಯವಹಾರದ ಸಂದೇಹ ಮೂಡುತ್ತಿದೆ

0
Suspicions of malfeasance are being raised in Jindal's company
Spread the love

ವಿಜಯಸಾಕ್ಷಿ ಸುದ್ದಿ, ಹಾವೇರಿ : ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಜಮೀನು ನೀಡಿರುವುದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಇದನ್ನು ತಕ್ಷಣ ನಿಲ್ಲಿಸಬೇಕು.ಇಲ್ಲದಿದ್ದರೆ ಇದರಲ್ಲಿ ಏನೋ ವ್ಯವಹಾರ ಕುದುರಿದೆ ಎಂಬ ಸಂದೇಹ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.

Advertisement

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಜಮೀನು ನೀಡುವ ಕುರಿತು ನಾವು ಅಧಿಕಾರದಲ್ಲಿದ್ದಾಗ ಸಂಪುಟದ ಮುಂದೆ ಪ್ರಸ್ತಾಪ ಬಂದಿತ್ತು. ಈ ಬಗ್ಗೆ ಚರ್ಚಿಸಿ ಸಂಪುಟ ಉಪ ಸಮಿತಿ ಮಾಡಿ, ಮಾರುಕಟ್ಟೆ ದರದಲ್ಲಿ ನೀಡಲು ತೀರ್ಮಾಣ ಕೈಗೊಂಡಿದ್ದೆವು. ಆ ಸಂದರ್ಭದಲ್ಲಿ ಕಾಂಗ್ರೆಸ್‌ನವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಅವತ್ತು ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ವಿರೋಧಿಸಿದ್ದರು. ಈಗ ರಾಜ್ಯಕ್ಕೆ ನಷ್ಟವಾಗುವ ರೀತಿಯಲ್ಲಿ ತೀರ್ಮಾಣ ಮಾಡುತ್ತಾರೆ ಎಂದರೆ, ಇದರಲ್ಲಿ ಏನೋ ವ್ಯವಹಾರ ಕುದುರಿದೆ ಎಂಬ ಸಂದೇಹ ಬರುತ್ತದೆ ಎಂದು ಹೇಳಿದರು.

ಬಿಜೆಪಿಯವರ ಮಾತು ಕೇಳಿ ರಾಜ್ಯಪಾಲರು ವಿಧೇಯಕಗಳನ್ನು ವಾಪಸ್ ಕಳುಹಿಸುತ್ತದ್ದಾರೆ ಎಂಬ ಕಾಂಗ್ರೆಸ್‌ನವರ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತಿಗಳ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಟ್ಟಿರುವುದಕ್ಕೆ ಸಹಜವಾಗಿಯೇ ಕಾಂಗ್ರೆಸ್‌ನವರು ಆ ರೀತಿ ಹೇಳುತ್ತಾರೆ.

ಯಡಿಯೂರಪ್ಪ ಅವರ ವಿರುದ್ಧವೂ ಖಾಸಗಿ ದೂರಿನ ಆಧಾರದಲ್ಲಿಯೇ ಪ್ರಾಷಿಕ್ಯೂಶನ್‌ಗೆ ಅನುಮತಿ ನೀಡಲಾಗಿತ್ತು ಎಂದು ಹೇಳಿದರು.

ರಾಜ್ಯ ಸರ್ಕಾರ ಯಾವುದೇ ಸಿದ್ಧತೆ ಇಲ್ಲದೇ, ಹಣಕಾಸಿನ ವ್ಯವಸ್ಥೆ ಇಲ್ಲದೇ ಕೇವಲ ರಾಜಕೀಯ ಲಾಭಕ್ಕಾಗಿ ಮಾಡಿರುವ ಗ್ಯಾರಂಟಿ ಯೋಜನೆ ಇದು. ಅದರ ಹಿಂದೆ ಪ್ರಾಮಾಣಿಕತೆ ಇದ್ದಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಎಲ್ಲರ ಮತ ಪಡೆಯಲು ಎಲ್ಲರಿಗೂ ಕೊಡುತ್ತೇವೆ ಎಂದು ಹೇಳಿದ್ದರು. ಈಗ ಅವರ ಬೊಕ್ಕಸಕ್ಕೆ ಬಿಸಿ ಮುಟ್ಟುತ್ತಿದೆ.

ಮುಖ್ಯಮಂತಿಗಳು ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳುತ್ತಾರೆ. ಆದರೆ, ಒಳಗಡೆಯಿಂದ ಇದನ್ನು ಬದಲಾವಣೆ ಮಾಡುವ ಕುರಿತು ಚರ್ಚೆ ನಡೆದಿದೆ. ತಾಂತ್ರಿಕ ಕಾರಣ ನೀಡಿ ಪ್ರತಿ ತಿಂಗಳು ಹಣ ನೀಡುತ್ತಿಲ್ಲ. ಇದು ಸಂಪೂರ್ಣವಾಗಿ ರಾಜ್ಯದ ಬೊಕ್ಕಸ ಖಾಲಿಯಾಗಿದೆ ಎನ್ನುವುದು ಸ್ಪಷ್ಟವಾಗಿದೆ. ವಿರೋಧ ಪಕ್ಷದವರು ಹೇಳಿದರೆ ಆರ್ಥಿಕ ಪರಿಸ್ಥಿತಿ ಸಧೃಢವಾಗಿದೆ ಎಂದು ಹೇಳುತ್ತಾರೆ. ರಾಜ್ಯದ ಆಡಳಿತ ಸಂಪೂರ್ಣವಾಗಿ ಹಳಿ ತಪ್ಪಿದೆ. ನೀರಿನ ದರ ಸೇರಿದಂತೆ ಎಲ್ಲ ದರಗಳೂ ಹೆಚ್ಚಳವಾಗಿವೆ ಎಂದು ಹೇಳಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತ್ಯೇಕ ಸಭೆ ಮಾಡುವ ಬಗ್ಗೆ ಹೈಕಮಾಂಡ್ ಗಮನದಲ್ಲಿದೆ. ಯತ್ನಾಳ್ ಅವರು ಪಕ್ಷದ ಬಲವರ್ಧನೆಗಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಪರ್ಯಾಯ ಪಾದಯಾತ್ರೆ ಅಲ್ಲ. ಕಾಂಗ್ರೆಸ್‌ನವರು ಅಧಿಕಾರದಲ್ಲಿಲ್ಲದಾಗ ಮಂಗಳೂರು ಕಡೆ ಒಂದು, ಕೃಷ್ಣಾ ಕಡೆ ಒಂದು ಯಾತ್ರೆ ಮಾಡಿದ್ದರು.

ಇಲ್ಲಿ ವಾಲ್ಮೀಕಿ ಪ್ರಕರಣ ಇದೆ. ದಕ್ಷಿಣದಲ್ಲಿ ಮುಡಾ ಪ್ರಕರಣ ಇದೆ. ಹೀಗಾಗಿ ಹೈಕಮಾಂಡ್ ಒಪ್ಪಿಗೆ ಕೊಟ್ಟರೆ ಅವರು ಪಾದಯಾತ್ರೆ ಮಾಡುತ್ತಾರೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ನಮ್ಮದೇ ಕೇಂದ್ರ ಸಚಿವರನ್ನು ರಾಜ್ಯದ ಹಿತದೃಷ್ಟಿಯಿಂದ, ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಭೇಟಿ ಆಗುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ. ನಾನೂ ಕೇಂದ್ರ ಸಚಿವ ಪಹ್ಲಾದ್ ಜೋಶಿಯವರನ್ನು ಭೇಟಿ ಮಾಡಿ ಬಂದಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.


Spread the love

LEAVE A REPLY

Please enter your comment!
Please enter your name here