ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಪದವಿ ವಿದ್ಯಾರ್ಥಿಯ ವಿರುದ್ಧ ಪೊಲೀಸರು ಸುಮೊಟೊ ಪ್ರಕರಣ ದಾಖಲಿಸಿದ್ದಾರೆ.
ಘಟನೆ ರಾತ್ರಿ ಗಸ್ತು ವೇಳೆ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಒಬ್ಬ ಯುವಕ ಅಸ್ವಸ್ಥನಂತೆ ತೂರಾಡುತ್ತಿರುವುದನ್ನು ಕಂಡ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದ್ದಾರೆ. ಆತನ ವರ್ತನೆ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಗಾಂಜಾ ಸೇವನೆ ಶಂಕೆ ವ್ಯಕ್ತವಾಗಿದೆ.
ಪೊಲೀಸರು ತಕ್ಷಣವೇ ಆತನನ್ನು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ವೈದ್ಯಕೀಯ ವರದಿಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ವಿನೋಬನಗರ ಪೊಲೀಸರು ಮಾದಕ ವಸ್ತು ಸೇವನೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.



