ಹಾಸನ: ಹಾಸನ ಹೊರವಲಯದ ಹನುಮಂತಪುರ ಬಳಿಯ ಕಾರ್ಖಾನೆಯಲ್ಲಿ ಫ್ಯಾಕ್ಟರಿ ಕೆಲಸಕ್ಕೆ ಹೋಗಿದ್ದ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಪುನೀತ್ (27) ಮೃತ ಯುವಕ. ಕಳೆದ 6 ತಿಂಗಳಿನಿಂದ ಅವರು ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಬುಧವಾರ ಎಂದಿನಂತೆ ಸಮವಸ್ತ್ರ ಧರಿಸಿ ಕೆಲಸಕ್ಕೆ ತೆರಳಿದ್ದರು. ಆದರೆ ಮಧ್ಯಾಹ್ನ ವೇಳೆಗೆ ಕಾರ್ಖಾನೆಯ ನೀರಿನ ಸಂಪ್‌ನಲ್ಲಿ ನಿಂತಿರುವ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ರಾತ್ರಿ ಪುನೀತ್ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಪೊಲೀಸರು ಸಾಗಿಸಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಶವಾಗಾರದ ಬಳಿ ನೂರಾರು ಮಂದಿ ಜಮಾಯಿಸಿದರು.
ಘಟನೆ ಕುರಿತು ಕಾರ್ಖಾನೆ ಮೇಲಾಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಾಹ್ನವೇ ಮೃತದೇಹ ಪತ್ತೆಯಾದರೂ ತಕ್ಷಣ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬೆಳಿಗ್ಗೆ ಸಮವಸ್ತ್ರದಲ್ಲೇ ಕೆಲಸಕ್ಕೆ ತೆರಳಿದ್ದ ಪುನೀತ್ ಮೃತಪಟ್ಟ ಬಳಿಕ ಸಮವಸ್ತ್ರ ಬದಲಾಯಿಸಲಾಗಿದೆ ಎಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ಇದು ಸಹಜ ಸಾವು ಅಲ್ಲ, ಕೊಲೆ ಎಂಬ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆಯಲ್ಲಿ ಶೇ.80ಕ್ಕೂ ಹೆಚ್ಚು ಹೊರರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಪದೇ ಪದೇ ಸಾವುಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪುನೀತ್ ಸ್ಥಳೀಯರಾಗಿರುವುದರಿಂದ ಪ್ರಕರಣವನ್ನು ಮುಚ್ಚಿಹಾಕಲು ಸಾಧ್ಯವಾಗದೇ ನಾಟಕವಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.
ಮೃತ ಪುನೀತ್ ಕಳೆದ ವಾರ ಪಾದಯಾತ್ರೆಯ ಮೂಲಕ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ದೇವಸ್ಥಾನದಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಫೆ.15ರಂದು ಗ್ರಾಮಕ್ಕೆ ಮರಳಿದ್ದರು. ಅವರಿಗೆ ಯಾವುದೇ ದುಶ್ಚಟಗಳೂ ಇರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಒಬ್ಬನೇ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



