ಬಾಗಲಕೋಟೆ : ಅನುಮಾನಾಸ್ಪದವಾಗಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ವಿದ್ಯಾಗಿರಿಯ ಖಾಸಗಿ ಪಿಜಿಯೊಂದರಲ್ಲಿ ನಡೆದಿದೆ. ಸೀಮಾ ರಾಠೋಡ (17) ಮೃತ ದುರ್ದೈವಿಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಸುನಗ ತಾಂಡಾದ ನಿವಾಸಿಯಾಗಿದ್ದಾಳೆ.
ನಗರದ ಪಿಯು ಕಾಲೇಜೊಂದರಲ್ಲಿ ಪ್ರಥಮ ವರ್ಷದ ಪಿಯುಸಿ ಓದುತ್ತಿದ್ದಳು. ಪಿಜಿಯಲ್ಲಿ ಕೆಲವು ವಿದ್ಯಾರ್ಥಿನಿಯರು ರೂಮ್ ಒಳಗೆ ಹೋಗುತ್ತಿದ್ದಂತೆ ಯುವತಿಯ ಮೃತದೇಹ ಸ್ಲ್ಯಾಬ್‍ನ ಹುಕ್‍ನಲ್ಲಿ ನೇತಾಡುತ್ತಿರುವುದನ್ನು ಕಂಡು ಕಿರುಚಾಡುತ್ತ ಹೊರಗೆ ಓಡಿ ಬಂದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ಸೀಮಾಳನ್ನ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲು ಮುಂದಾದ್ರು ಪ್ರಯೋಜನವಾಗಿಲ್ಲ.
ಸ್ಥಳದಲ್ಲಿ ಮೃತ ಸೀಮಾಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನಮಗೆ ಸಾವಿನಲ್ಲಿ ಸಂಶಯವಿದೆ ಸೂಕ್ತ ತನಿಖೆಯಾಗಬೇಕೆಂದು ಆಗ್ರಹ ಮಾಡಿದ್ದಾರೆ. ಪ್ರಕರಣ ಕುರಿತು ಪ್ರಾಥಮಿಕ ಹಂತದ ತನಿಖೆ ನಡೆಯುತ್ತಿದ್ದು, ಡಿಡಿಪಿಯು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಹ ಕಾಲೇಜು ಹಾಗೂ ಹಾಸ್ಟೆಲ್ ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.