ಬೆಂಗಳೂರು:- ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಹಸೀಲ್ದಾರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ.
ಮೃತ ತಹಸೀಲ್ದಾರರನ್ನು ಗದಗ ಮೂಲದ 56 ವರ್ಷದ ಜೆ.ಬಿ. ಜಕ್ಕಣ್ಣಗೌಡ್ರ ಎಂದು ಗುರುತಿಸಲಾಗಿದೆ. ಜಕ್ಕಣ್ಣಗೌಡ್ರ ಅವರು ಕೋರ್ಟ್ ಕೆಲಸಕ್ಕೆಂದು ಬೆಂಗಳೂರಿಗೆ ಆಗಮಿಸಿ ಕಪಾಲಿ ಥಿಯೇಟರ್ ಸಮೀಪದ ವೈಭವ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು.
ಆದ್ರೆ, ನಿನ್ನೆ ರಾತ್ರಿ 9ರ ಸುಮಾರಿಗೆ ಅವರು ರೂಮ್ನಲ್ಲಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಒಂದೆಡೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದರೆ ಮತ್ತೊಂದೆಡೆ ಈ ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ.
ಇನ್ನು ತೀರ್ಥಹಳ್ಳಿಯ ತಹಸೀಲ್ದಾರ ಜೆ.ಬಿ. ಜಕ್ಕಣ್ಣಗೌಡ್ರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಲ್ಲಿದ್ದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಕೂಡಲೇ ಲಾಡ್ಜ್ ಗೆ ಆಗಮಿಸಿದ್ದಾರೆ. ಹಾಗೇ ಸ್ಥಳಕ್ಕೆ ಇನ್ನು ಉಪ್ಪಾರ ಪೇಟೆ ಪೊಲೀಸ್ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ನಂತರ ಸಾವಿನ ಕುರಿತು ಸತ್ಯಾಸತ್ಯತೆ ತಿಳಿಯಲಿದೆ.
ಮೂಲತಃ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತುಪ್ಪದಕುರಹಟ್ಟಿ ಗ್ರಾಮದವರಾದ ಗಂಗನಗೌಡ ಜಕ್ಕಣ್ಣಗೌಡ್ರ ಗ್ರಾಮ ಲೆಕ್ಕಾಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಅವರು, ಗದಗ, ರೋಣ, ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ತಹಸೀಲ್ದಾರ ಆಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿಗೆ ಚಿಕ್ಕಮಗಳೂರು ಜಿಲ್ಲೆಯ ತೀರ್ಥಹಳ್ಳಿಗೆ ವರ್ಗಾವಣೆಗೊಂಡಿದ್ದರು.
ಕಂದಾಯ ಇಲಾಖೆಯಲ್ಲಿ ಅಪಾರ ಜ್ಞಾನ ಹೊಂದಿದ್ದ ಜಿ.ಬಿ ಜಕ್ಕಣಗೌಡ್ರ, ಸಿಬ್ಬಂದಿ ವರ್ಗದವರಿಗೆ ಅಚ್ಚುಮೆಚ್ಚಿನ ಅಧಿಕಾರಿಯಾಗಿದ್ದರು. ಅವರ ನಿಧನದ ಸುದ್ದಿ ತಿಳಿದು ಗದಗ ಜಿಲ್ಲಾ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಕಂಬನಿ ಮಿಡಿದಿದ್ದಾರೆ.