ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ ಮಠದಲ್ಲಿ ಚನ್ನವೀರಶರಣರ 30ನೇ ಪುಣ್ಯ ಸ್ಮರಣೋತ್ಸವ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಮಹಾತ್ಮರ ಜೀವನ ದರ್ಶನ ಪ್ರವಚನದ ಮಂಗಲೋತ್ಸವ ಜರುಗಿತು.
ಸನ್ನಿಧಾನ ವಹಿಸಿದ ಹೂವಿನಹಡಗಲಿ ಗವಿಮಠದ ಮ.ನಿ.ಪ್ರ. ಡಾ. ಹಿರಿಯ ಶಾಂತವೀರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಸಮಾಜದಲ್ಲಿ ಮೊಬೈಲ್ ಹಾವಳಿಯಿಂದ ಒಳ್ಳೆಯ ಮಾತು ಕೇಳಲು, ಮಾತನಾಡಲು ಹಾಗೂ ಒಳ್ಳೆಯ ಕೆಲಸಕ್ಕೆ ಸಮಯವಿಲ್ಲದಂತಾಗಿದೆ. ಸಾಮಾಜಿಕ ಜಾಲತಾಣದಿಂದ ನಮ್ಮತನವನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ. ಮೊದಲು ಮನೆ ಚಿಕ್ಕದಾಗಿದ್ದವು, ಈಗ ಮನೆಗಳು ದೊಡ್ಡದಾಗಿವೆ. ಆದರೆ, ಮನಸ್ಸು ಚಿಕ್ಕದಾಗುತ್ತಿರುವುದು ವಿಪರ್ಯಾಸವಾಗಿದೆ. ಮನುಷ್ಯನನ್ನು ಎತ್ತರಕ್ಕೆ ಒಯ್ಯಲು ಗುರುನಿಷ್ಠೆ, ಶ್ರದ್ಧೆ ವಿಶ್ವಾಸ, ಬಂಧುತ್ವ, ಪ್ರೇಮತ್ವ ಮುಖ್ಯವಾಗಿದೆ. ಇಂತಹ ಎಲ್ಲ ಅಂಶಗಳನ್ನು ಶ್ರೀ ಶಿವಶಾಂತವೀರ ಶರಣರಲ್ಲಿ ಕಾಣುತ್ತೇವೆ ಎಂದರು.
ವಿಧಾನಪರಿಷತ ಸದಸ್ಯ ಎಸ್.ವ್ಹಿ. ಸಂಕನೂರ ಮಾತನಾಡಿ, ಮಹಾತ್ಮರ ಪ್ರವಚನವು, ಭಕ್ತರಿಗೆ ಸರಿಯಾದ ಮಾರ್ಗಕ್ಕೆ ತರುವುದಾಗಿದೆ. ಪ್ರವಚನದಿಂದ ವ್ಯವಸ್ಥಿತ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗಿದೆ. ಇಂತಹ ಪವಿತ್ರ ಕಾರ್ಯಕ್ರಮವದಲ್ಲಿ ಭಾಗವಹಿಸುವುದರಿಂದ ಸಮಾಜದಲ್ಲಿ ಯಾವ ರೀತಿ ಬದುಕಬೇಕೆಂದನ್ನು ತಿಳಿಯುವುದರ ಜೊತೆಗೆ ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ. ಅಧಿಕಾರ, ಆಸ್ತಿ, ಶ್ರೀಮಂತಿಕೆ ಇದ್ದರೂ ಸಹ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಮನುಷ್ಯನ ಜೀವನ ವ್ಯರ್ಥ. ಜೀವನದ ಸಾರ್ಥಕತೆ ಪಡೆಯಲು ಜೀವನ ದರ್ಶನ, ಪ್ರವಚನ ಮಾರ್ಗದರ್ಶನ ನೀಡುತ್ತದೆ ಎಂದರು.
ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಚನ್ನವೀರಶರಣರ ಸಾಮಾಜಿಕ ಕಳಕಳಿಯನ್ನು, ಅವರ ಅಂತಃಕರಣವನ್ನು ನೆನೆದು ಪ್ರಸ್ತುತ ಶ್ರೀಗಳ ಸಮಾಜಮುಖಿ ಕಾರ್ಯಗಳನ್ನು ಹಾಗೂ ಶರಣರ ಒಡನಾಟವನ್ನು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಕೀರ್ತಿ ಉಮೇಶ ಚಟ್ರಿ ಇವಳಿಂದ ಭರತ ನಾಟ್ಯ ಪ್ರದರ್ಶನ ಜರುಗಿತು. ನಾಡಿನ ಹೆಸರಾಂತ ಅನುಭಾವಿಗಳಾದ ಮುದಗಲ್ಲ ಮಹಾಂತೇಶ್ವರ ಮಠದ ಕಲ್ಯಾಣ ಆಶ್ರಮದ ಪೂಜ್ಯ ಮಹಾಂತ ಸ್ವಾಮಿಗಳಿಂದ ಪ್ರವಚನದ ಮಂಗಲದ ನುಡಿ ಸೇವೆ ಜರುಗಿತು.
ಶಂಕ್ರಯ್ಯ ಆರ್.ಗುರುಮಠ ಸಂಗೀತ, ಹೇಮಂತಕುಮಾರ ಹಿರೇಮಠ ತಬಲಾಸಾಥ, ವಿದ್ವಾನ್ ರವಿಕುಮಾರ ಅವರಿಂದ ವಾಯೋಲಿನ್ ವಾದನ ಜರುಗಿತು. ಸದ್ಭಕ್ತರಿಂದ ಶಿವಶಾಂತವೀರ ಶರಣರಿಂದ ತುಲಾಭಾರ ಜರುಗಿತು. ಪ್ರಾಚಾರ್ಯ ಎಚ್.ಬಿ. ಯಲಬುರ್ಗಿ, ಸುನಂದಾ ಅಲ್ಲಂ ವೇದಿಕೆಯಲ್ಲಿದ್ದರು.
ಎಸ್.ಎಸ್. ಪುರಾಣಿಕಮಠ ಸ್ವಾಗತಿಸಿದರು. ಶಿವಲಿಂಗಯ್ಯಶಾಸ್ತ್ರಿ ಸಿದ್ದಾಪೂರ ನಿರೂಪಿಸಿದರು. ಶಿವು ಗಣಾಚಾರಿ ವಂದಿಸಿದರು.
**ಬಾಕ್ಸ್**
ಜೀವನದಲ್ಲಿ ದೀನದಲಿತರ, ಬಡವರ, ಅವಕಾಶ ವಂಚಿತರ ಉಪಕಾರ ಮಾಡಿ, ಕಣ್ಣೀರು ಒರೆಸುವ ಕೆಲಸ ಮಾಡಿ, ನಾವು ಬದುಕಲು ಜೊತೆಗೆ ನಮ್ಮವರನ್ನು ಬದುಕಿಸುವುದು ಎಂಬ ಸಮಷ್ಟಿ ಪ್ರಜ್ಞೆಯನ್ನು ಶ್ರೀಮಠ ಮತ್ತು ಶ್ರೀಗಳು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಿವಶಾಂತವೀರ ಶರಣರು ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಮಹತ್ವದ ಅರಿತು ಶೈಕ್ಷಣಿಕ ಸಂಸ್ಥೆಯ ಮೂಲಕ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಶಿಕ್ಷಣದ ಮೂಲಕ ಕೈಗೆ ಕೆಲಸ, ಹೊಟ್ಟೆಗೆ ಅನ್ನ ನೀಡುವ ಔದ್ಯೋಗಿಕ ಶಿಕ್ಷಣ ನೀಡುತ್ತಿದ್ದಾರೆ. ಬಡವರ, ರೈತರ, ಕಾರ್ಮಿಕರ, ಹಿಂದುಳಿದ ಮಕ್ಕಳ ಉದ್ಧಾರಕ್ಕಾಗಿ ಶ್ರಮಿಸುತ್ತಿರುವುದು ಅಭಿನಂದನೀಯ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ನುಡಿದರು.