ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡಿಸೆಂಬರ್ 1ರಿಂದ 30ರವರೆಗೆ `ತೆರಿಗೆ ವಸೂಲಾತಿ ವಿಶೇಷ ಅಭಿಯಾನ’ ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ಎಲ್ಲಾ ಗ್ರಾ.ಪಂ ಸಿಬ್ಬಂದಿಗಳು ಕೈಜೋಡಿಸಿ ಅಭಿಯಾನ ಯಶಸ್ವಿಗೊಳಿಸಬೇಕೆಂದು ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ.ಕಂದಕೂರ ಹೇಳಿದರು.
ತಾಲೂಕಿನ ಅಮರಗೋಳ ಗ್ರಾ.ಪಂ ವ್ಯಾಪ್ತಿಯ ಬಸರಕೋಡ ಗ್ರಾಮದ ಕರ ವಸೂಲಿ ಅಭಿಯಾನದಲ್ಲಿ ಗ್ರಾ.ಪಂ ಸಿಬ್ಬಂದಿಗಳ ಜೊತೆಗೆ ಮನೆ ಮನೆ ಭೇಟಿ ನೀಡಿ, ಕರ ವಸೂಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾ.ಪಂಗಳು ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸಶಕ್ತ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲು ಆರ್ಥಿಕವಾಗಿ ಸಬಲೀಕರಣ ಹೊಂದುವ ಅವಶ್ಯಕತೆಯಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ಪ್ರಕರಣ 200(7) ರಲ್ಲಿ ನಿರ್ದಿಷ್ಟಪಡಿಸಿರುವಂತೆ ಗ್ರಾಮ ಪಂಚಾಯಿತಿಗೆ ಸಲ್ಲಿಕೆ ಆಗಬೇಕಾಗಿರುವ ತೆರಿಗೆಯಲ್ಲಿ ಶೇ.100ರಷ್ಟು ವಸೂಲಿ ಮಾಡುವುದು ಗ್ರಾ.ಪಂನ ಪ್ರಾಥಮಿಕ ಹೊಣೆಗಾರಿಕೆಯಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾ.ಪಂಗಳಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಕ್ರೋಢೀಕರಿಸಿಕೊಳ್ಳಲು ಕರವಸೂಲಾತಿ ಅಭಿಯಾನವನ್ನು ವಿಶೇಷ ಅಂದೋಲನವನ್ನಾಗಿ ತಾಲೂಕಿನಲ್ಲಿ ನಡೆಸಬೇಕಿದೆ. ಆದ್ದರಿಂದ ಎಲ್ಲಾ ಗ್ರಾ.ಪಂಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಡಿ.1ರಿಂದ ಡಿ.30ರವರೆಗೆ ಕಡ್ಡಾಯವಾಗಿ ತೆರಿಗೆ ವಸೂಲಾತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದರು.
ತಾಲೂಕಿನ ಎಲ್ಲಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಕರ ವಸೂಲಾತಿ ಅಭಿಯಾನವನ್ನು ಗ್ರಾ.ಪಂ ಕಾರ್ಯದರ್ಶಿಗಳು, ನೀರಗಂಟಿಗಳು ಸಿಬ್ಬಂದಿಗಳು ಜೊತೆ ಸೇರಿಕೊಂಡು ಮನೆಗಳು, ಅಂಗಡಿ ಮುಂಗಟ್ಟು, ಮಳಿಗೆಗಳಿಗೆ ತೆರಳಿ ಕರ ವಸೂಲಾತಿ ಕೈಗೊಂಡು ಅಭಿಯಾನ ಯಶಸ್ವಿಗೊಳಿಸಲು ಸಹಕಾರ ನೀಡಿದರೆ ನಿಗದಿತ ಗುರಿಯನ್ನು ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ಅಮರಗೋಳ ಗ್ರಾ.ಪಂ ಅಧ್ಯಕ್ಷ ಈರಣ್ಣ ಹೊರಕೇರಿ, ಗ್ರಾ.ಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿ ಶಿವಕುಮಾರ ಡೊಳ್ಳಿನ, ತಾ.ಪಂ ತಾಂತ್ರಿಕ ಸಂಯೋಜಕ ಪ್ರವೀಣ ಸೂಡಿ ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.



