ನವದೆಹಲಿ: 2026ರ ಟಿ20 ವಿಶ್ವಕಪ್ ಟೂರ್ನಿಯ 18ನೇ ಪಂದ್ಯದಲ್ಲಿ ಭಾರತ ತಂಡ ನಮೀಬಿಯಾ ವಿರುದ್ಧ 93 ರನ್‌ಗಳ ಭಾರಿ ಜಯ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಫೆಬ್ರವರಿ 12ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. 20 ಓವರ್‌ಗಳಲ್ಲಿ 209 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನಟ್ಟಿದ ನಮೀಬಿಯಾ 116 ರನ್‌ಗಳಿಗೆ ಆಲೌಟ್ ಆಯಿತು.
ಸಂಜು ಸ್ಯಾಮ್ಸನ್ ಹಾಗೂ ಇಶಾನ್ ಕಿಶನ್ ಜೋಡಿ ಪವರ್‌ಪ್ಲೇನಲ್ಲಿ ಭರ್ಜರಿ ಆರಂಭ ನೀಡಿತು. ಮೊದಲ 6 ಓವರ್‌ಗಳಲ್ಲಿ 86 ರನ್‌ಗಳನ್ನು ಸೇರಿಸಿದರು. ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 24 ಎಸೆತಗಳಲ್ಲಿ 61 ರನ್‌ಗಳಿಸಿ ಔಟಾದರು.
ಮಧ್ಯಮ ಕ್ರಮದಲ್ಲಿ ಹಾರ್ದಿಕ್ ಪಾಂಡ್ಯ 28 ಎಸೆತಗಳಲ್ಲಿ 52 ರನ್‌ಗಳ ದಿಟ್ಟ ಇನ್ನಿಂಗ್ಸ್ ಆಡಿದರು. ಆದರೆ ಕೊನೆಯ ಎರಡು ಓವರ್‌ಗಳಲ್ಲಿ ಭಾರತ 10 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸ್ವಲ್ಪ ಕುಸಿತ ಕಂಡಿತು. ನಮೀಬಿಯಾ ನಾಯಕ ಗೆರ್ಹಾರ್ಡ್ ಎರಾಸ್ಮಸ್ 4 ವಿಕೆಟ್ ಪಡೆದು ಮೆರೆದರು.
209 ರನ್‌ಗಳ ಗುರಿ ಬೆನ್ನಟ್ಟಿದ ನಮೀಬಿಯಾ ಪವರ್‌ಪ್ಲೇನಲ್ಲಿ 57 ರನ್‌ಗಳೊಂದಿಗೆ ಉತ್ತಮ ಆರಂಭ ಕಂಡಿತು. ಜಾನ್ ಫ್ರೈಲಿಂಕ್ ಹಾಗೂ ಲಾರೆನ್ ಸ್ಟೀನ್‌ಕ್ಯಾಂಪ್ ಉತ್ತಮ ಜೊತೆಯಾಟ ಕಟ್ಟಿದರು. ಆದರೆ ಪವರ್‌ಪ್ಲೇ ನಂತರ ಪಂದ್ಯ ತಿರುವು ಪಡೆದುಕೊಂಡಿತು.
ವರುಣ್ ಚಕ್ರವರ್ತಿ ಸತತ ಎರಡು ಓವರ್‌ಗಳಲ್ಲಿ 3 ವಿಕೆಟ್ ಪಡೆದು ನಮೀಬಿಯಾದ ಬೆನ್ನುಮುರಿದರು. ನಂತರ ಅಕ್ಷರ್ ಪಟೇಲ್ 2 ವಿಕೆಟ್ ಪಡೆದು ಒತ್ತಡ ಹೆಚ್ಚಿಸಿದರು. ಹಾರ್ದಿಕ್ ಪಾಂಡ್ಯ 18ನೇ ಓವರ್‌ನಲ್ಲಿ 2 ವಿಕೆಟ್ ಪಡೆದು ನಮೀಬಿಯಾದ ಸೋಲನ್ನು ಖಚಿತಪಡಿಸಿದರು.
ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದ ಹಾರ್ದಿಕ್ ಪಾಂಡ್ಯ ಪಂದ್ಯದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಟೂರ್ನಿಯಲ್ಲಿ ತನ್ನ ಪಾಯಿಂಟ್‌ಗಳನ್ನು ಮತ್ತಷ್ಟು ಬಲಪಡಿಸಿದೆ



