ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಮಣ್ಣು ಅಕ್ರಮ ಗಣಿಗಾರಿಕೆ/ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇದಕ್ಕೆ ತಾಲೂಕಿನ ತಹಸೀಲ್ದಾರರ ಸಹಕಾರವೇ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕೂಲಂಕುಷವಾಗಿ ಮಾಹಿತಿ ಪಡೆದು, ವಿಚಾರಣೆ ಮಾಡಿ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷ ಶರಣು ಗೋಡಿ ಆಗ್ರಹಿಸಿದರು.
ಈ ಕುರಿತು ಬುಧವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಸೂರಣಗಿ ಗ್ರಾಮದ ಸರ್ವೇ ನಂ.326ರ ಪಟ್ಟಾ ಭೂಮಿಯಲ್ಲಿ ಯಾವುದೇ ಅನುಮತಿ ಇಲ್ಲದೇ ಹಿಟಾಚಿ ಮತ್ತು ಹಲವು ಟಿಪ್ಪರ್‌ಗಳ ಮೂಲಕ ಹಗಲಿನಲ್ಲಿಯೇ ರಾಜಾರೋಷವಾಗಿ ಮಣ್ಣು ಸಾಗಾಣಿಕೆ ಮಾಡಲಾಗುತ್ತಿದೆ. ಈ ಬಗ್ಗೆ ತಹಸೀಲ್ದಾರರಿಗೆ ನೇರ ದೃಶ್ಯಾವಳಿ ಮೂಲಕ ತಿಳಿಸಿದರೂ ಯಾವುದೇ ಕ್ರಮವಾಗಿಲ್ಲ ಎಂದರು.
ಜಿಲ್ಲಾ ಉಪವಿಭಾಗಾಧಿಕಾರಿಗಳಿಗೆ, ಭೂ-ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ತಡೆಯುವ ಕ್ರಮವಾಗಿಲ್ಲ. ತಹಸೀಲ್ದಾರ ವಾಸುದೇವ ಸ್ವಾಮಿ ಅವರು ಈ ಅಕ್ರಮ ತಿಳಿದಿದ್ದರೂ ಕಣ್ಣು ಮುಚ್ಚಿ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ. ತಾಲೂಕಿನ ಅಕ್ಕಿಗುಂದ, ಶೆಟ್ಟಿಕೆರಿ, ಗೊಜನೂರ ಸೇರಿ ಅನೇಕ ಕಡೆ ಈ ರೀತಿ ಮಣ್ಣು ಅಕ್ರಮದೊಂದಿಗೆ ಮರಳು ಸಾಗಾಣಿಕೆಯೂ ನಡೆಯುತ್ತಿರುವುದಕ್ಕೆ ಇವರ ಸಹಕಾರವೇ ಕಾರಣವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಆಡೂರ, ತಾಲೂಕಾಧ್ಯಕ್ಷ ನಾಗೇಶ ಅಮರಾಪೂರ, ಕೈಸರ್ ಮಹ್ಮದ್‌ಅಲಿ, ಗೌಸಮೋದಿನ್ ಜಮಖಂಡಿ, ನದೀಮ್ ಕುಂದಗೋಳ ಇದ್ದರು.
ಮೇಲ್ನೋಟಕ್ಕೆಂಬಂತೆ ಕೆಲ ಬಾರಿ ರೈತರು ರಸ್ತೆ ಮತ್ತು ಸ್ವಂತಕ್ಕೆ ಒಂದೆರಡು ಟ್ರ್ಯಾಕ್ಟರ್ ಮೊರಂ/ ಗೊರಸು ಹೇರಿದರೆ ಅವರ ಮೇಲೆ ಕೇಸ್ ಹಾಕುತ್ತಾರೆ. ದೊಡ್ಡ ಪ್ರಮಾಣದ ಅಕ್ರಮ ನಡೆದರೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ಹರಿಸಿ ತಹಸೀಲ್ದಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಶರಣು ಗೋಡಿ ಆಗ್ರಹಿಸಿದರು.