ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಲಕ್ಷ್ಮೇಶ್ವರ, ಮುಂಡರಗಿ, ಶಿರಹಟ್ಟಿ ಸೇರಿ ಒಟ್ಟು 750 ಮನೆಗಳು ಮಂಜೂರಾಗಿದ್ದು, ಅದರಲ್ಲಿ ಲಕ್ಷೇಶ್ವರದಲ್ಲಿಯೇ 500 ಮನೆಗಳು ನಿರ್ಮಾಣವಾಗುತ್ತಿವೆ. ಈ ಮನೆಗಳ ನಿರ್ಮಾಣ ಮಾಡುತ್ತಿರುವ ಕರ್ನಾಟಕ ಕೊಳಚೆ ಅಭವೃದ್ಧಿ ಮಂಡಳಿಯ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ಉಪಯೋಗಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಭಿಯಂತರಿಗೆ, ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತ ಕಚೇರಿಗೆ ಸೋಮವಾರ ಮನವಿ ಸಲ್ಲಿಸಿದರು.
ಗುತ್ತಿಗೆದಾರರಿಗೆ ಮೌಖಿಕವಾಗಿ ಗುಣಮಟ್ಟದ ಸಾಮಗ್ರಿ ಬಳಸಲು ತಿಳಿಸಿದರೂ ಸಹ ಜನರಿಗೆ ಹಾಗೂ ಸಂಘಟನೆಯವರಿಗೆ ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದಾರೆ. ಅಧಿಕಾರಿಗಳಿಗೂ ಮತ್ತು ಗುತ್ತಿಗೆದಾರರಿಗೂ ಹೊಂದಾಣಿಕೆ ಇರುವದು ಇದರಿಂದ ತಿಳಿದುಬರುತ್ತದೆ. 10 ದಿನಗಳೊಳಗಾಗಿ ಗುತ್ತಿಗೆದಾರನ ಮೇಲೆ ಸೂಕ್ತ ಕ್ರಮ ಕೈಗೊಂಡು ಕಪ್ಪು ಪಟ್ಟಿಗೆ ಸೇರಿಸಬೇಕು. ಇದಕ್ಕೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಹೋದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಬಳಗದ ವತಿಯಿಂದ ಹೋರಾಟ ಮಾಡಲಾಗುವುದು. ನ್ಯಾಯ ಸಿಗದೇ ಹೋದರೆ ಮುಂಬರುವ ಲೋಕಸಭಾ ಚುನಾವಣೆ-2024ರ ಮತದಾನವನ್ನು ಬಹಿಷ್ಕರಿಸಲಾಗುವದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳು ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಬಸವರಾಜ ಹಿರೇಮನಿ, ಸುರೇಶ ನಂದೆಣ್ಣವರ, ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಬಸವರಾಜ ಕಲ್ಲೂರ ಸೇರಿದಂತೆ ಅನೇಕರಿದ್ದರು.
ಮನವಿಯಲ್ಲಿ ಮನೆ ನಿರ್ಮಾಣದ ಸಮಸ್ಯೆಗಳನ್ನು ತಿಳಿಸಿರುವ ಸಂಘಟನೆಯವರು, ಒಂದು ಮನೆಗೆ ಸರಕಾರದಿಂದ 6,39,000 ರೂ ಟೆಂಡರ್ ಆಗಿದ್ದು, ಗುತ್ತಿಗೆದಾರರೇ ಸುಸಜ್ಜಿತವಾದ ಮನೆಗಳನ್ನು ಕಟ್ಟಿಕೊಡಲು ಸರಕಾರದ ಕರಾರು ಇದ್ದರೂ ಸಹಿತ ಮನೆ ಇಲ್ಲದ ಬಡ ಫಲಾನುಭವಿಗಳೇ ಮನೆಯನ್ನು ಕಟ್ಟಿಕೊಳ್ಳುತ್ತಿದ್ದಾರೆ. ಒಂದು ಮನೆಯನ್ನು ಕಟ್ಟಿಕೊಳ್ಳಲು ಈಗ ಸುಮಾರು 4.4ರಿಂದ 5 ಲಕ್ಷ ರೂ. ಖರ್ಚಾಗುತ್ತಿದ್ದು, ಗುತ್ತಿಗೆದಾರರು ತುಕ್ಕು ಹಿಡಿದ ಕಬ್ಬಿಣ, ಸಿಮೆಂಟ್, ಕಡಿ, ಎಮ್.ಸ್ಯಾಂಡ್, ಬ್ಲ್ಯಾಕ್ ಇಟ್ಟಂಗಿ ಇವೆಲ್ಲವುಗಳು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.