ವಿಜಯಸಾಕ್ಷಿ ಸುದ್ದಿ, ಗದಗ : ಕನ್ನಡದ ಕುಲಗುರುಗಳು, ಭಾವೈಕ್ಯತೆಯ ಹರಿಕಾರರೆನಿಸಿದ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳ 75ನೇ ಜಯಂತಿಯನ್ನು ಫೆ.21ರಂದು `ಭಾವೈಕ್ಯತಾ ದಿನಾಚರಣೆ’ ಎಂದು ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಆಕ್ಷೇಪಿಸಿ ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿರುವ ದಿಂಗಾಲೇಶ್ವರ ಶ್ರೀಗಳ ಪ್ರತಿಭಟನೆಯನ್ನು ನಿಷೇಧಿಸಬೇಕೆಂದು ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅಭಿಮಾನಿಗಳು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಫೆ.21ರಂದು ಬೆಳಿಗ್ಗೆ 8.30ಕ್ಕೆ ನಗರದ ಭೀಷ್ಮಕೆರೆಯ ಬಸವೇಶ್ವರ ಪುತ್ಥಳಿಯಿಂದ ಜಗದ್ಗುರು ತೋಂಟದಾರ್ಯ ಮಠದವರೆಗೆ ಸಹಸ್ರಾರು ಭಕ್ತರು `ಭಾವೈಕ್ಯತಾ ಯಾತ್ರೆ’ ನಡೆಸಲಿದ್ದು, ಯಾತ್ರೆಯು ಭೀಷ್ಮಕೆರೆಯಿಂದ, ಪುಟ್ಟರಾಜರ ಸರ್ಕಲ್, ಕೆ.ಎಚ್. ಪಾಟೀಲ ವೃತ್ತ, ಬಸವೇಶ್ವರ ವೃತ್ತ (ಹತ್ತಿಕಾಳ ಕೂಟ), ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ್ ಸರ್ಕಲ್ ಮಾರ್ಗವಾಗಿ ಶ್ರೀಮಠವನ್ನು ತಲುಪುವುದು. ಇದಾದ ಬಳಿಕ ಶ್ರೀಮಠದಲ್ಲಿ ಪ್ರತಿ ವರ್ಷದಂತೆ ವೇದಿಕೆ ಕಾರ್ಯಕ್ರಮ ಜರುಗುವುದು. ಈ ಕಾರ್ಯಕ್ರಮಗಳಿಗೆ ಸೂಕ್ತ ಭದ್ರತೆ ನೀಡಿ ಶಾಂತಿ ಕದಡುವವರ ವಿರುದ್ಧ ಕ್ರಮ ಕೈಕೊಳ್ಳುವಂತೆ ಶ್ರೀಮಠದ ಭಕ್ತರು ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತೋಂಟದಾರ್ಯ ಮಠದ ಹಿರಿಯ ಭಕ್ತರಾದ ಎಸ್.ಎಸ್. ಕಳಸಾಪೂರಶೆಟ್ಟರ, ಕೇಂದ್ರ ಸರ್ಕಾರದ ರಾಷ್ಟಿಯ ಕೋಮು ಸೌಹಾರ್ದತಾ ಹಾಗೂ ದೇಶದ ಏಕತಾ ಪ್ರಶಸ್ತಿ, ರಾಜ್ಯ ಸರ್ಕಾರದಿಂದ ಬಸವ ಪುರಸ್ಕಾರ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಲಿಂ. ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ಭಾವೈಕ್ಯತೆಗಾಗಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲೇ ಹೆಸರುವಾಸಿಯಾಗಿದ್ದರು. ಇಂಥ ಮಹಾತ್ಮರ ಜಯಂತಿಯನ್ನು 2019ರಿಂದಲೇ ಶ್ರೀಮಠದಿಂದ ಭಾವೈಕ್ಯತಾ ದಿನಾಚರಣೆಯನ್ನಾಗಿ ಆಚರಿಸುತ್ತಾ ಬರಲಾಗುತ್ತಿದ್ದು, ದಿಂಗಾಲೇಶ್ವರ ಶ್ರೀಗಳಿಗೆ ಈ ಕಾರ್ಯಕ್ರಮವನ್ನು ಧಿಕ್ಕರಿಸುವ ಯಾವುದೇ ಅರ್ಹತೆ ಇಲ್ಲ ಎಂದರು.
ದಲಿತ ಸಂಘದ ಮುಖ್ಯಸ್ಥರಾದ ಮೋಹನ ಆಲಮೇಲಕರ ಮಾತನಾಡಿ, ಭಾವೈಕ್ಯತೆ ಎಂಬುದು ಯಾರೊಬ್ಬರ ಖಾಸಗಿ ಸೊತ್ತಲ್ಲ. ಬದಲಿಗೆ ಅದು ಈ ದೇಶದ ಉಸಿರಾಗಿದ್ದು, ಇಂದಿನ ದಿನಗಳಲ್ಲಿ ಭಾವೈಕ್ಯತೆಯನ್ನು ಅತಿ ಹೆಚ್ಚು ಪ್ರಚುರಪಡಿಸಬೇಕಿದೆ. ಈ ಕಾರ್ಯವನ್ನು ಸಿದ್ಧಲಿಂಗ ಶ್ರೀಗಳು ತಮ್ಮ ಜೀವನದುದ್ದಕ್ಕೂ ಮಾಡಿಕೊಂಡು ಬಂದಿದ್ದರು. ಅವರು ಪೀಠಕ್ಕೆ ಬರುವ ಪೂರ್ವದಲ್ಲಿ ಶ್ರೀಮಠದ ಮುಂದೆ ಇದ್ದ `ಲಿಂಗಾಯತರಿಗೆ ಮಾತ್ರ ಪ್ರವೇಶ’ ಎಂಬ ಬೋರ್ಡ್ ಕಿತ್ತೆಸೆದು ಶ್ರೀಮಠವನ್ನು ಎಲ್ಲ ಸಮುದಾಯಗಳ ಕೇಂದ್ರಸ್ಥಾನವನ್ನಾಗಿಸಿದರು. ಶ್ರೀಮಠದ ಜಾತ್ರೆಗಳಿಗೆ ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯಗಳ ಭಕ್ತರುಗಳನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಭಾವೈಕ್ಯತೆಗೆ ಹೊಸ ವ್ಯಾಖ್ಯಾನ ಬರೆದರು. ದಿಂಗಾಲೇಶ್ವರ ಶ್ರೀಗಳು ಇತಿಹಾಸ ತಿಳಿದುಕೊಳ್ಳುವ ಅನಿವಾರ್ಯತೆ ಇದ್ದು, ಪ್ರತಿಭಟನೆಯ ಬೆದರಿಕೆ ಒಡ್ಡುವುದು ಸ್ವಾಮೀಜಿಗಳಾದವರ ಘನತೆಗೆ ಶೋಭೆ ತರುವುದಿಲ್ಲ ಎಂದರು.
ಶ್ರೀಮಠದ ಇನ್ನೋರ್ವ ಭಕ್ತರಾದ ಚಂದ್ರು ಚವ್ಹಾಣ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ಪದೇ ಪದೇ ನಮ್ಮ ಗುರುಗಳಾದ ಸಿದ್ಧಲಿಂಗ ಶ್ರೀಗಳ ವಿರುದ್ಧ ಬಹಿರಂಗ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ನಾವು ದಿಂಗಾಲೇಶ್ವರರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಅಂಜುಮನ್ ಕಮಿಟಿ ಮುಖ್ಯಸ್ಥರು ಹಾಗೂ ಶ್ರೀಮಠದ ಭಕ್ತರಾದ ಎಂ.ಜಿ ಶೇಖ ಮಾತನಾಡಿ, ಶ್ರೀಮಠದ ಬಾಗಿಲನ್ನು ಹಾಗೂ ತಮ್ಮ ಹೃದಯದ ಬಾಗಿಲನ್ನು ಸರ್ವ ಜನಾಂಗದವರಿಗೆ ಮುಕ್ತವಾಗಿ ತೆರೆದಿಟ್ಟಿದ್ದ ತೋಂಟದ ಸಿದ್ಧಲಿಂಗ ಶ್ರೀಗಳು ಮಸೀದಿಗಳ ನಿರ್ಮಾಣಕ್ಕೆ ತಮ್ಮ ಮಠದ ಜಮೀನುಗಳನ್ನು ದಾನ ನೀಡುವ ಮೂಲಕ ಭಾವೈಕ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಶಿವಾನುಭವ ಕಾರ್ಯಕ್ರಮದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ-ಜೈನ ಹೀಗೆ ಸಕಲ ಧರ್ಮಗಳ ಮುಖ್ಯಸ್ಥರನ್ನು ಕರೆಸಿ ಅವರಿಂದ ಆಯಾ ಧರ್ಮದ ಉದಾತ್ತ ಚಿಂತನೆಗಳ ಕುರಿತು ಉಪನ್ಯಾಸ ಏರ್ಪಡಿಸಿದ್ದಾರೆ. ಲಿಂಗೈಕ್ಯ ಗುರುಗಳ ಭಾವೈಕ್ಯ ನಿಲುವುಗಳು ಪ್ರಶ್ನಾತೀತವಾಗಿದ್ದು, ದಿಂಗಾಲೇಶ್ವರ ಶ್ರೀಗಳು ಪೂರ್ವಾಗ್ರಹ ಪೀಡಿತರಾಗಿ ಇಂಥ ನಡೆಯನ್ನು ಕೈಕೊಂಡಿರುವುದನ್ನು ನಾವು ಧಿಕ್ಕರಿಸುತ್ತೇವೆ ಎಂದರು.
ಶ್ರೀಮಠದ ಭಕ್ತರಾದ ಡಾ. ನೂರಾನಿ, ಚನ್ನಯ್ಯ ಹಿರೇಮಠ, ಶೇಖಣ್ಣ ಕಳಸಾಪೂರಶೆಟ್ಟರ, ಎಸ್.ಬಿ. ಶೆಟ್ಟರ್, ಬಾಲಚಂದ್ರ ಭರಮಗೌಡರ, ಎಸ್.ಎನ್. ಬಳ್ಳಾರಿ, ಲೋಕೇಶ್, ಐ.ಬಿ. ಬೆನಕೊಪ್ಪ, ಕೆ.ಎಚ್. ಬೇಲೂರ, ಕೃಷ್ಣಾ ಪರಾಪೂರ, ಅಶೋಕ ಕುಡತಿನಿ, ರಾಮು ಬಳ್ಳಾರಿ, ಮಂಜುನಾಥ ಕೋಟ್ನಿಕಲ್, ಪ್ರಕಾಶ ಅಸುಂಡಿ, ನಾರಾಯಣಸ್ವಾಮಿ, ಅಮರೇಶ ಅಂಗಡಿ, ಸಿಎನ್‌ಎ ಪಾಟೀಲ, ಶೇಖಣ್ಣ ಕವಳಿಕಾಯಿ, ಆರ್.ಎಸ್. ಗುಜಮಾಗಡಿ, ದಾನಯ್ಯ ಗಣಾಚಾರಿ, ಎಸ್.ಎಸ್. ಭಜಂತ್ರಿ, ವೈ.ಎನ್. ಗೌಡರ, ನಾಗರಾಜ ತಳವಾರ, ಮುರುಘೇಶ ಬಡ್ನಿ ಮುಂತಾದವರಿದ್ದರು.