ವಿಜಯಸಾಕ್ಷಿ ಸುದ್ದಿ, ಗದಗ: ಸ್ಲಂ ಜನರು ಭೂಮಾಲೀಕರಿಂದ ಜಾಗ ಖರೀದಿಸಿ, ಮನೆಗಳನ್ನು ಕಟ್ಟಿಕೊಂಡು ವಾಸವಿದ್ದು, ಅದೇ ಭೂಮಿಯನ್ನು ಭೂ ಮಾಫಿಯಾಗಳ ಮೂಲಕ ಮತ್ತೆ ಮಾರಾಟ ಮಾಡಿ ಸ್ಲಂ ಜನರ ಭೂಮಿಯನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿರುವುದನ್ನು ಖಂಡಿಸಿ ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ಜನರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ರಿ.ಸ.ನಂ. 594 ಕ್ಷೇತ್ರ. 2 ಎಕರೆ, 34 ಗುಂಟೆ ಜಾಗೆಯನ್ನು ಸ್ಲಂ ಕಾಯ್ದೆ 1973ರ ಪ್ರಕಾರ ಸ್ಲಂ ಘೋಷಣೆಗಾಗಿ ಪ್ರಸ್ತಾವನೆ ಕಳುಹಿಸಲಾಗಿದೆ. ಈ ಪ್ರದೇಶಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸ್ಲಂ ಬೋರ್ಡ್ನಿಂದ ಹೆಸ್ಕಾಂ ಕಚೇರಿಗೆ ಪತ್ರ ಕಳುಹಿಸಲಾಗಿದೆ. ಅನೇಕ ಕುಟುಂಬಗಳಿಗೆ ಮನೆ ಮಂಜೂರಾತಿ ಪತ್ರಗಳನ್ನು ನೀಡಲಾಗಿದೆ. ಭೂಮಿ ಮಾಲಿಕ ಬರೆದು ಕೊಟ್ಟಿರುವ ಖರೀದಿ ಪತ್ರಗಳು ಜೊತೆಗೆ ಸ್ಥಳೀಯ ನಿವಾಸಿಗಳು ಈ ಪ್ರದೇಶದಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿರುವ ಕುರಿತು ಸರ್ಕಾರದ ಅನೇಕ ದಾಖಲೆಗಳೂ ಇವೆ. ಹೀಗಿರುವಾಗಲೇ ಭೂಮಿ ಕಬಳಿಕೆಯ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಗದಗ ಜಿಲ್ಲಾ ದಲಿತ ಸಂಘರ್ಸ ಸಮಿತಿ ಮುಖಂಡ ಪ್ರೊ. ಸತೀಶ ಫಾಸಿ ಮಾತನಾಡಿ, ಭೂ ಮಾಲೀಕನಿಗೆ ಲಕ್ಷಾಂತರ ರೂ ಹಣವನ್ನು ನೀಡಿ ನಿವೇಶನಗಳನ್ನು ಪಡೆದು ಮನೆಗಳನ್ನು ನಿರ್ಮಿಸಿಕೊಂಡು ವಾಸವಾಗಿರುವ ಬಡ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಭೂ ಮಾಫಿಯಾಗಳು ಭಯ ಮೂಡಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗದಗ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹ್ಮದಯುಸುಫ ನಮಾಜಿ, ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಖಾಜಾಸಾಬ ಇಸ್ಮಾಯಿಲನವರ, ಅಶೋಕ ಗುಮಾಸ್ತೆ, ವೆಂಕಟೇಶ ಬಿಂಕದಕಟ್ಟಿ, ಶರಣಪ್ಪ ಸೂಡಿ, ಮೆಹಬೂಬಸಾಬ ಬಳ್ಳಾರಿ, ಗೌಸಸಾಬ ಅಕ್ಕಿ, ರವಿ ಗೋಸಾವಿ, ಸಾಕ್ರುಬಾಯಿ ಗೋಸಾವಿ, ಮಲೇಶ ಬಿಂಕದಕಟ್ಟಿ, ದಾದಾಪೀರ ನರಗುಂದ, ಭರಮಣ್ಣ ಗಾಯಕವಾಡ, ದಾದಾಪೀರ ಅಣ್ಣಿಗೇರಿ, ರಿಜ್ವಾನ ಮುಲ್ಲಾ, ಮಕ್ತುಮಸಾಬ ಮುಲ್ಲಾನವರ, ನಾರಾಯಣ ಗಾಯಕವಾಡ, ಸುನೀಲ ಗೊಂದಳಿ, ಅಲ್ತಾಫ ರಾಣೆಬೆನ್ನೂರ, ಹರತಅಲಿ ಹಾವೇರಿ, ಮಹ್ಮದರಫೀಕ ಬರದೂರ, ಕಸ್ತೂರಿ ಹಳ್ಳಿ, ಪರುಶರಾಮ ಗಾಯಕವಾಡ, ರುದ್ರವ್ವ ಕಲಬಂಡಿ, ಖಾಜಾಸಾಬ ಉಮಚಗಿ, ನಜೀರಅಹ್ಮದ ಹಾವಗಾರ, ಮೆಹಬೂಬ ಮುಲ್ಲಾ ಮುಂತಾದವರಿದ್ದರು.
ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಮಾತನಾಡಿ, ಜಿಲ್ಲಾಧಿಕಾರಿಗಳು ನವನಗರ ಪ್ರದೇಶದ ಕುಟುಂಬಗಳಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಜನರಿಗೆ ಮೋಸ ಮಾಡಿ ಭೂ ಮಾಫಿಯಾಗಳ ಮೂಲಕ ಜನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಭೂ ಮಾಲಿಕನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.