ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ (ಡಿಡಬ್ಲ್ಯುಎಸ್‌ಎಂ)ನ ಪಾತ್ರ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ಅಧಿಕಾರಿಗಳು ಕೆಲಸ ನಿರ್ವಹಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಸುಧಾರಿತ ಮಟ್ಟದ ಸ್ವಚ್ಛತೆಗೆ ಕ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ್ ಎಸ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜರುಗಿದ ಡಿಡಬ್ಲ್ಯುಎಸ್‌ಎಂ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಗ್ರಾಮಗಳನ್ನು ಓಡಿಎಫ್ + ಮಾದರಿ (ಬಯಲು ಶೌಚ ಮುಕ್ತ) ಗ್ರಾಮಗಳನ್ನಾಗಿ ಮಾಡುವುದು, ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ಮಟ್ಟದ ಸ್ವಚ್ಛತೆ ಖಚಿತಪಡಿಸುವುದು, ಕುಡಿಯುವ ನೀರಿನ ಮೂಲಗಳ ಸುಸ್ಥಿರತೆಯ ಕಾಮಗಾರಿಗಳು ಮತ್ತು ಬೂದು ನೀರು ನಿರ್ವಹಣೆಗೆ ಸಂಬಂಧಿಸಿದಂತೆ ವಿವಿಧ ಜವಾಬ್ದಾರಿಗಳನ್ನು ಡಿಡಬ್ಲ್ಯುಎಸ್‌ಎಂ (ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್) ಹೊಂದಿದೆ. ಕಾರ್ಯಕ್ರಮದ ಅನುಷ್ಟಾನಿತ ಅಧಿಕಾರಿಗಳು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕಗಳು, ಸ್ವಚ್ಛ ಸಂಕೀರ್ಣ ಘಟಕ, ತ್ಯಾಜ್ಯ ಸಂಗ್ರಹಣೆ ವಾಹನಗಳು, ದ್ರವ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ, ಮಲ ತ್ಯಾಜ್ಯ ನಿರ್ವಹಣೆ, ಗೋಬರ್ದನ್ ಘಟಕಗಳ ಕ್ರಿಯಾತ್ಮಕತೆ, ಕಾರ್ಯಾಚರಣೆ ಮತ್ತು ಸುಸ್ಥಿರತೆಯ ಮೇಲ್ವಿಚಾರಣೆ, ಪ್ರತಿ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಖಚಿತಪಡಿಕೊಳ್ಳುವುದು, ನಿಯಮಿತವಾಗಿ ಗ್ರಾಮ ಮಟ್ಟದ ಕಾಮಗಾರಿಗಳನ್ನು ವೀಕ್ಷಿಸಿ ಪರಿಶೀಲನೆ ನಡೆಸುವುದರೊಂದಿಗೆ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಸೂಚಿಸಿದರು.
ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಿಗೆ ನೀರಿನ ಸಂಪರ್ಕ ಇರುವ ಬಗ್ಗೆ ಜಂಟಿ ಸಮೀಕ್ಷೆ ಕೈಗೊಂಡು ವಾರಾಂತ್ಯದಲ್ಲಿ ವರದಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.
ಆWSಒ ನ ಸದಸ್ಯ ಕಾರ್ಯದರ್ಶಿಗಳಾದ ಗ್ರಾಮೀಣ ನೀರು ಸರಬರಾಜು ಕಾರ್ಯನಿರ್ವಾಹಕ ಅಭಿಯಂತರ ರಾಘವೇಂದ್ರ ಹೊಸಮನಿ ಮಾತನಾಡಿ, ಸರ್ಕಾರದ ಆದೇಶದನ್ವಯ ರಾಜ್ಯದಲ್ಲಿ ನೀರು ಮತ್ತು ನೈರ್ಮಲ್ಯ ಕಾರ್ಯಗಳ ಒಟ್ಟಾರೆ ಅನುಷ್ಟಾನಕ್ಕಾಗಿ ಮತ್ತು ಪರಿಶೀಲನೆಗಾಗಿ ಡಿಡಬ್ಲ್ಯುಎಸ್‌ಎಂ ರಚಿಸಲಾಗಿದೆ. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕರಿಗಳು ಸಮಿತಿಯ ಅಧ್ಯಕ್ಷರಾಗಿದ್ದು, ಜಿಲ್ಲಾ ಅರಣ್ಯ, ಬುಡಕಟ್ಟು ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾ ವೈದ್ಯಾಧಿಕಾರಿ, ಜಿಲ್ಲಾ ಐಸಿಡಿಎಸ್, ಶಾಲಾ ಶಿಕ್ಷಣ ಇಲಾಖೆ, ಜಲ ಸಂಪನ್ಮೂಲ/ಅಂತರ್ಜಲ/ನೀರಾವರಿ, ಕೃಷಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು, ನೀರು ನಿರ್ವಹಣೆ, ಸಮುದಾಯ ಆರೋಗ್ಯ, ಸಮುದಾಯ ಅಭಿವೃದ್ಧಿ ಇತ್ಯಾದಿ ಕ್ಷೇತ್ರಗಳ ಪ್ರಮುಖ್ಯ ವ್ಯಕ್ತಿಗಳು ಸದಸ್ಯರುಗಳಾಗಿರುತ್ತಾರೆ ಎಂದು ಸಭೆಗೆ ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಬಸನಗೌಡ್ರ ಕೊಟ್ಟೂರ, ಮಕ್ಕಳ ನಿರೂಪಣಾಧಿಕಾರಿ ರಾಧಾ ಮಣ್ಣೂರ, ಜಿ.ಪಂ ಯೋಜನಾ ನಿರ್ದೇಶಕ ಚಳಗೇರಿ, ಶಿಗ್ಲಿ, ಅಂತೂರ ಬೆಂತೂರ ಗ್ರಾ.ಪಂ ಅಧ್ಯಕ್ಷರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ವಸಂತ ಮಡ್ಲೂರ ಸೇರಿದಂತೆ ಕಾರ್ಯಕ್ರಮದ ಅನುಷ್ಟಾನಿತ ಅಧಿಕಾರಿಗಳು ಹಾಜರಿದ್ದರು.
ಪ್ರತಿ ಗ್ರಾಮದಲ್ಲಿ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಕ್ಲೋರಿನೇಷನ್ ವ್ಯವಸ್ಥೆ ಖಚಿತಪಡಿಸುವುದು ಹಾಗೂ ಯೋಜನೆಗಳ ಅನುಷ್ಟಾನದಲ್ಲಿ ತೊಡಗಿರುವ ವ್ಯಕ್ತಿಗಳ ಸಾಮರ್ಥ್ಯ ವೃದ್ಧಿ, ತರಬೇತುದಾರರಿಗೆ ತರಬೇತಿ, ಅನುಷ್ಟಾನ ಬೆಂಬಲ ಸಂಸ್ಥೆಗಳ (ಐಎಸ್‌ಐ) ಬಳಕೆ, ಸ್ವಯಂ ಸೇವಕರು, ಮಹಿಳಾ ಸ್ವ-ಸಹಾಯ ಗುಂಪುಗಳು ಇತ್ಯಾದಿಗಳನ್ನು ಖಚಿತಪಡಿಸುವುದು. ಯೋಜನೆಗಳಿಗೆ ಸಂಬಂಧಿಸಿದಂತೆ ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಕ್ರಮ ವಹಿಸಬೇಕೆಂದು ಭರತ್ ಎಸ್ ತಿಳಿಸಿದರು.