ವಿಜಯಸಾಕ್ಷಿ ಸುದ್ದಿ, ಗದಗ: ನುಲಿಯ ಚಂದಯ್ಯ ಜಯಂತಿಯನ್ನು ಆಗಸ್ಟ್ 9ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಆಚರಿಸಲಾಗುತ್ತಿದೆ. ಜಯಂತಿಯನ್ನು ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಡಾ. ದುರುಗೇಶ ಕೆ.ಆರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ನುಲಿಯ ಚಂದಯ್ಯ ಜಯಂತಿ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ತಾಲೂಕು, ಗ್ರಾಮ ಪಂಚಾಯಿತಿ ಹಾಗೂ ಶಾಲೆಗಳಲ್ಲಿಯೂ ಸಹ ಜಯಂತಿ ಆಚರಣೆಗೆ ಕ್ರಮ ವಹಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಶಿಷ್ಟಾಚಾರದನ್ವಯ ಆಮಂತ್ರಣ ಪತ್ರಿಕೆ ಮುದ್ರಣಕ್ಕೆ ಕ್ರಮ ವಹಿಸಬೇಕು. ಕಾರ್ಯಕ್ರಮದಲ್ಲಿ ವಿವಿಧ ಸಾಧನೆಗೈದ ಸಮಾಜದ 5 ಜನರಿಗೆ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನಿಸಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಮಾತನಾಡಿ, ಜಯಂತಿಯ ವೇದಿಕೆಯ ಕಾರ್ಯಕ್ರಮದ ಮುಂಚಿತವಾಗಿ ಮೆರವಣಿಗೆಯು ನಗರದ ಕಿತ್ತೂರು ಚೆನ್ನಮ್ಮ ಸರ್ಕಲ್‌ನಿಂದ ಕಾರ್ಯಕ್ರಮದ ಸ್ಥಳಕ್ಕೆ ತಲುಪಲಿದೆ. ನುಲಿಯ ಚಂದಯ್ಯ ಅವರ ಜೀವನ ಸಾಧನೆಗಳ ಕುರಿತು ಪ್ರೊ. ಎಂ.ಸಿ. ಕಟ್ಟಿಮನಿ ಉಪನ್ಯಾಸ ನೀಡಲಿದ್ದಾರೆ. ಮೆರವಣಿಗೆಯಲ್ಲಿ ಶಹನಾಯಿ ಕಲಾ ತಂಡ ಸೇರಿದಂತೆ ಎರಡು ಕಲಾ ಪ್ರಕಾರಗಳು ಪಾಲ್ಗೊಳ್ಳಲಿವೆ. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ, ಸಮಾಜದ ಸಾರ್ವಜನಿಕರಿಗೆ ಉಪಹಾರ ವ್ಯವಸ್ಥೆ ಮಾಡಲಾಗುವುದು, ಪ್ರಚಾರಕ್ಕಾಗಿ ನಗರದ ವಿವಿಧೆಡೆ ಬ್ಯಾನರ್ ಅಳವಡಿಸಲಾಗುವುದು ಎಂದು ಸಭೆಗೆ ವಿವರಿಸಿದರು.
ಈ ಸಂದರ್ಭದಲ್ಲಿ ನುಲಿಯ ಚಂದಯ್ಯ ಸಮಾಜದ ಪ್ರಮುಖರಾದ ಮೋಹನ ಭಜಂತ್ರಿ, ಸುರೇಶ ಕಟ್ಟಿಮನಿ, ಮಾಂತೇಶ, ಭೀಮಸೇನ, ಪರಶುರಾಮ ಕಟ್ಟಿಮನಿ, ಅಶೋಕ ಕಟ್ಟಿಮನಿ, ಎಸ್.ಡಿ. ಭಜಂತ್ರಿ ಸೇರಿದಂತೆ ಸಮುದಾಯದ ಮುಖಂಡರು ಹಾಜರಿದ್ದರು.