ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಬಣದಲ್ಲಿನ ಉಮಚಗಿಯವರ ಓಣಿ, ಕೌಲಪೇಟೆ ಓಣಿಗಳಲ್ಲಿ ಕಳೆದ ಎಂಟು ದಿನಗಳಿಂದ ಕೊಳವೆ ಬಾವಿ ನೀರು ಪೂರೈಕೆ ಆಗಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ನೀರಿನ ಹಾಹಾಕಾರ ಉಂಟಾಗಿದ್ದು ಬೇಗನೇ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಆಗ್ರಹಿಸಿ ಗುರುವಾರ ನಿವಾಸಿಗಳು ಪುರಸಭೆ ವ್ಯವಸ್ಥಾಪಕಿ ಮಂಜುಳ ಹೂಗಾರ ಅವರಿಗೆ ಮನವಿ ಸಲ್ಲಿಸಿದರು.
ನದಿ ನೀರು ತಿಂಗಳಿಗೊಮ್ಮೆ ಪೂರೈಕೆ ಆಗುತ್ತಿದೆ. ಹೀಗಾಗಿ ಉಳಿದ ದಿನಗಳಲ್ಲಿ ಕೊಳವೆ ಬಾವಿ ನೀರೇ ನಮಗೆ ಗತಿ. ಆದರೆ ಎಂಟು ದಿನಗಳಿಂದ ಆ ನೀರೂ ಪೂರೈಕೆ ಆಗುತ್ತಿಲ್ಲ. ದನ-ಕರುಗಳಿಗೆ ನೀರು ಕುಡಿಸಲೂ ಸಹ ತೊಂದರೆ ಆಗಿದೆ. ಕಾರಣ ಬೇಗನೇ ನೀರು ಪೂರೈಸಬೇಕು. ಓಣಿಯಲ್ಲಿನ ಚರಂಡಿಗಳನ್ನು ಸ್ವಚ್ಛ ಮಾಡಿಲ್ಲ. ಹೀಗಾಗಿ ಓಣಿ ತುಂಬ ಹೊಲಸು ವಾಸನೆ ತುಂಬಿದೆ. ಆದಷ್ಟು ಬೇಗನೇ ಪುರಸಭೆ ಚರಂಡಿಗಳನ್ನು ಸ್ವಚ್ಛ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ನೀರಾಲೋಟಿ, ಪರಮೇಶ ಹತ್ತಿಕಟ್ಟಿ, ಅಶೋಕ ಹೊಂಗಲ, ನಾಗರಾಜ ಅಂಬಲಿ, ಮಲ್ಲಪ್ಪ ಉಮಚಗಿ, ಅಕ್ಷಯ್ ಓದುನವರ ಮತ್ತಿತರರು ಇದ್ದರು.



