ವಿಜಯಸಾಕ್ಷಿ ಸುದ್ದಿ, ಗದಗ: ಬಾಂಗ್ಲಾದೇಶದ ಸರ್ಕಾರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯಬೇಕು. ಭಾರತ ಸರ್ಕಾರವು ಬಾಂಗ್ಲಾದೇಶದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕ್ರಮ ಕೈಗೊಳ್ಳಬೇಕೆಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಅವರು ಗದಗನಲ್ಲಿ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಕಚೇರಿಯಲ್ಲಿ ನಡೆದ ಮಹಾಸಭಾದ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬಾಂಗ್ಲಾದೇಶ ಸ್ವತಂತ್ರ ದೇಶವಾಗಲು ಭಾರತ ದೇಶ ಮಾಡಿದ ಸಹಾಯ ಎಂದೆಂದಿಗೂ ಬಾಂಗ್ಲಾದೇಶದ ಸರಕಾರ ಮತ್ತು ಬಾಂಗ್ಲಾದೇಶ ಜನರು ಮರೆಯಬಾರದು. ಉಕ್ಕಿನ ಮಹಿಳೆ, ದಿವಂಗತ ಇಂದಿರಾ ಗಾಂಧಿ ಅವರ ನಿರ್ಧಾರದ ಪ್ರತಿಫಲವೇ ಬಾಂಗ್ಲಾದೇಶ ಇಂದು ಸ್ವತಂತ್ರ ದೇಶವಾಗಿ ಮಾರ್ಪಟ್ಟಿದೆ.
ಜಗತ್ತಿನ ಯಾವುದೇ ದೇಶದಲ್ಲಿ ಯಾವುದೇ ತರಹದ ಸರಕಾರ ಬಂದರೂ ಅಲ್ಲಿ ವಾಸಿಸುವ ಪ್ರತಿಯೊಬ್ಬ ಅಲ್ಪಸಂಖ್ಯಾತರ ಹಕ್ಕು ಮತ್ತು ಬಾಧ್ಯತೆಗಳನ್ನು ರಕ್ಷಿಸುವಲ್ಲಿ ಅಲ್ಲಿನ ಸರಕಾರಗಳು ಪ್ರಾಮಾಣಿಕವಾಗಿ ಶ್ರಮ ವಹಿಸಬೇಕು. ಜಾತಿ, ಭಾಷೆ, ಜನಾಂಗೀಯ ಮತ್ತು ವರ್ಣ ಆಧಾರಿತ ಎಲ್ಲ ಅಲ್ಪಸಂಖ್ಯಾತರ ರಕ್ಷಣೆ ಆಗಲೇಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದ ನಡೆಯನ್ನು ಖಂಡಿಸುವ ಮೂಲಕ ಭಾರತ ಸರಕಾರ ತಕ್ಷಣ ಅಚಿತಾರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಕ್ರಮ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ



