ವಿಜಯಸಾಕ್ಷಿ ಸುದ್ದಿ, ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಂದಿನ ನೇಮಕಾತಿ ಸಂದರ್ಭದಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಕನಿಷ್ಠ ಶೇ.20ರಿಂದ 25ರಷ್ಟು ಮೀಸಲಾತಿ ನೀಡಲು ಕ್ರಮ ಕೈಗೊಳ್ಳುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದರು.
ಗ್ರಾಮೀಣ ಗೃಹ ವಿಜ್ಞಾನ ಮಹಾವಿದ್ಯಾಲಯ, ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಪದವೀಧರರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನನ್ನ ಇಲಾಖೆಗೆ ಅಗತ್ಯವಾದ ಕೌಶಲ್ಯಗಳನ್ನು ಇಲ್ಲಿ ಕಲಿಸಲಾಗುತ್ತದೆ. ಇಲ್ಲಿ ಪದವಿ ಪಡೆದವರು ನಮ್ಮ ಇಲಾಖೆಗೆ ಹೆಚ್ಚು ಸೂಕ್ತವಾಗುತ್ತಾರೆ. ಈಗಾಗಲೇ ಸಾಕಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ನೇಮಕಾತಿ ಸಂದರ್ಭದಲ್ಲಿ ಹೆಚ್ಚು ಆದ್ಯತೆ ನೀಡುವ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುವೆ. ಜೊತೆಗೆ ಗ್ರಾಮೀಣಾಭಿವೃದ್ಧಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರ ಜೊತೆಗೂ ಚರ್ಚೆ ನಡೆಸಿ ಕೂಸಿನ ಮನೆ ಸೇರಿದಂತೆ ವಿವಿಧ ಯೋಜನೆಗಳಲ್ಲಿ ಸಮುದಾಯ ವಿಜ್ಞಾನ ಪದವೀಧರರಿಗೆ ಹೆಚ್ಚು ಅವಕಾಶ ಸಿಗುವಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಈಗ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜ ಬಹಳಷ್ಟು ಬದಲಾಗಿದೆ. ಗಂಡಸರ ಯೋಚನಾ ರೀತಿ ಸಹ ಬದಲಾಗಿದೆ. ಗಂಡು-ಹೆಣ್ಣು ಎಂಬ ಬೇಧ-ಭಾವ ಉಳಿದಿಲ್ಲ. ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಲಾಗುತ್ತಿದೆ. ನಮ್ಮ ದೇಶದ ಸಕಾರಾತ್ಮಕ ಬೆಳವಣಿಗೆಗೆ ಇದು ಕೂಡ ಕಾರಣವಾಗಿದೆ ಎಂದು ಹೇಳಿದರು.
ಧಾರವಾಡವನ್ನು ವಿದ್ಯಾಕಾಶಿ ಎಂದು ಕತೆಯುತ್ತೇವೆ. ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ನಮ್ಮ ಹೆಮ್ಮೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಣ್ಣಿಸಿದರು.
ಈ ವೇಳೆ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ, ವಿದ್ಯಾಧಿಕಾರಿ ಡಾ. ಲತಾ ಪೂಜಾರ್, ನಿವೃತ್ತ ಡೀನ್ ಪುಷ್ಪ ಖಾದಿ, ಪದವೀಧರರ ಸಂಘದ ಅಧ್ಯಕ್ಷರಾದ ಡಾ. ಸರೋಜಿನಿ ಕರಕಣ್ಣವರ್, ಕಾರ್ಯದರ್ಶಿ ಡಾ. ವೀಣಾ ಜಾಧವ, ಜಂಟಿ ಕಾರ್ಯದರ್ಶಿ ಡಾ. ಸಾಧನಾ ಕುಳ್ಳೊಳ್ಳಿ, ಖಜಾಂಚಿ ಡಾ. ಮಂಜುಳಾ ಪಾಟೀಲ, ಸಹ ಖಜಾಂಚಿ ಡಾ. ಉಮಾ ಕುಲಕರ್ಣಿ, ಸದಸ್ಯರಾದ ಡಾ. ಹೇಮಲತಾ, ಡಾ. ರೇಣುಕಾ ಸಾಳುಂಕೆ, ಡಾ. ಗೀತಾ ಚಿಟಗುಬ್ಬಿ, ಡಾ. ಪ್ರೇಮಾ ಪಾಟೀಲ, ಡಾ. ರಾಜೇಶ್ವರಿ, ಮಾಳವಿಕಾ ಮೊಕಾಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
“ಈ ಹಿಂದೆ ಮಹಿಳೆಯರು ಅಡುಗೆ ಮನೆಗೆ ಸೀಮಿತರಾಗಿದ್ದರು. ಅಂತಹ ಸಂದರ್ಭದಲ್ಲಿ ಈ ಕಾಲೇಜು ಆರಂಭವಾಗಿದೆ. ಆ ಸಂದರ್ಭದಲ್ಲೂ ಸಾಕಷ್ಟು ಮಹಿಳೆಯರು ಈ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಕಲಿಯುವ ಉತ್ಸಾಹ ಇದ್ದರೆ ಎಲ್ಲವೂ ಸಾಧ್ಯ ಎನ್ನುವುದನ್ನು ತೋರಿಸಿದ್ದಾರೆ. ಕೆಲವರಿಗೆ ಅವಕಾಶ ಕಡಿಮೆ ಸಿಗಬಹುದು, ಕೆಲವರಿಗೆ ಜಾಸ್ತಿ ಸಿಗಬಹುದು. ಆದರೆ ಅದನ್ನು ಸದುಪಯೋಗಪಡಿಸಿಕೊಳ್ಳುವ ಮನೋಭಾವ ಬೇಕು”
– ಲಕ್ಷ್ಮೀ ಹೆಬ್ಬಾಳಕರ್.
ಮಹಿಳಾ, ಮಕ್ಕಳ ಅಭಿವೃದ್ಧಿ ಸಚಿವರು.