ಆತ್ಮ ನಿರ್ಭರ ಯೋಜನೆಯ ಲಾಭ ಪಡೆಯಿರಿ: ಡಾ. ದುರಗೇಶ್ ಕೆ.ಆರ್ 

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಆತ್ಮನಿರ್ಭರ ಭಾರತ ಅಭಿಯಾನ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ (ಪಿಎಂಎಫ್‌ಎಎಐ) ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ನೀಡುವ ಸಹಾಯಧನ ಯೋಜನೆಯಾಗಿದೆ. ಹೊಸ ಆಹಾರ ಸಂಸ್ಕರಣಾ ಉದ್ಯಮ ಪ್ರಾರಂಭಿಸಲು ಹಾಗೂ ಚಾಲ್ತಿಯಲ್ಲಿರುವ ಉದ್ಯಮಗಳನ್ನು ವಿಸ್ತರಿಸಲು ಅವಕಾಶವಿದೆ. ಬ್ಯಾಂಕ್ ಸಾಲದೊಂದಿಗೆ ಶೇ.50ರಷ್ಟು ಸಹಾಯಧನ, ಗರಿಷ್ಠ 15 ಲಕ್ಷಗಳವರೆಗೆ ಸಹಾಯಧನವಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್ ತಿಳಿಸಿದರು.

Advertisement

ಗದಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ), ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಮತ್ತು ಕೆಪೆಕ್ ಲಿಮಿಟೆಡ್ ಬೆಂಗಳೂರು ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಪಿಎಂಎಫ್‌ಎಎಐ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ಆರ್ಥಿಕವಾಗಿ ಸಬಲರಾಗಬೇಕಾದರೆ ಕೃಷಿ ವಿಶ್ವವಿದ್ಯಾಲಯದ ಹಾಗೂ ಕೃಷಿ ಇಲಾಖೆಯ ಮಾರ್ಗದರ್ಶನ ಪಡೆದುಕೊಳ್ಳುವುದು ಮುಖ್ಯವಾಗಿದೆ. ಆತ್ಮ ನಿರ್ಭರ ಯೋಜನೆಯ ಲಾಭವನ್ನು ಎಲ್ಲ ಅರ್ಹ ಫಲಾನುಭವಿಗಳು ಪಡೆದುಕೊಳ್ಳಬೇಕು. ಬೇಕರಿ ಉದ್ಯಮ, ಖಾರದ ಪುಡಿ ತಯಾರಿಕೆ, ಹೊಸ ಆಹಾರ ಸಂಸ್ಕರಣಾ ಉದ್ಯಮಗಳನ್ನು ಪ್ರಾರಂಭಿಸಲು ಪ್ರೊಜೆಕ್ಟ್ ತಯಾರಿಸಿ ಕೃಷಿ ಇಲಾಖೆಗೆ ಸಲ್ಲಿಸಿದಾಗ ಸೂಕ್ತ ಮಾರ್ಗದರ್ಶನದಿಂದ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಈ ಕಾರ್ಯಾಗಾರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ರೈತರಿಗೆ ಅಭಿನಂದನಾ ಪತ್ರ, ಉದ್ಯಮದಾರರಿಗೆ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು. ಪಿಎಂಎಫ್‌ಎಎಐ ಯೋಜನೆಯ ಫಲಾನುಭವಿಗಳ ಯಶಸ್ಸಿನ ಕುರಿತು ಕಿರುಚಿತ್ರ ಪ್ರದರ್ಶನ ಜರುಗಿತು. ಉದ್ಯಮದಾರರಾದ ಮುಳಗುಂದದ ರಾಜೇಶ್ವರಿ ಬಡ್ನಿ, ವಾಸುದೇವ ಇಲ್ಲೂರು ಹಾಗೂ ಇತರರು ತಮ್ಮ ಅನುಭವಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಉಪಾಧ್ಯಕ್ಷ ಹೂವಣ್ಣವರ, ಜಿಲ್ಲಾ ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಅರಹುಣಸಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ವೀರೇಂದ್ರ ಪಾಟೀಲ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸಂತೋಷ ಎಂ, ಕೆಪೆಕ್ ಸಂಸ್ಥೆಯ ವಿಘ್ನೇಶ, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಹುಲಗಣ್ಣವರ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳ್ಳಾರಿ, ವಾರ್ತಾಧಿಕಾರಿ ವಸಂತ ಮಡ್ಲೂರ, ಕೃಷಿ ವಿಜ್ಞಾನ ಕೇಂದ್ರದ ವಿನಾಯಕ ಸೇರಿದಂತೆ ಕೃಷಿ ಇಲಾಖೆಯ ಉಪನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು, ಅಧಿಕಾರಿಗಳು ಹಾಜರಿದ್ದರು.

ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕಿ ಸೀಮಾ ಸವಣೂರ ಕಾರ್ಯಕ್ರಮ ನಿರೂಪಿಸಿದರು. ಉಪ ಕೃಷಿ ನಿರ್ದೇಶಕಿ ಸ್ಪೂರ್ತಿ ಜಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿ.ಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ ಮಾತನಾಡಿ, ಪಿಎಂಎಫ್‌ಎಎಐ ಒಂದು ಉಪಯುಕ್ತವಾದ ಯೋಜನೆಯಾಗಿದೆ. ಫಲಾನುಭವಿಗಳಿಗೆ ಸಾಲ ನೀಡುವಲ್ಲಿ ಬ್ಯಾಂಕ್‌ಗಳು ಸಹಕರಿಸುತ್ತವೆ. ಬೇಡಿಕೆಗನುಸಾರವಾಗಿ ರೈತರು ಬೆಳೆ ಬೆಳೆದು ಮಾರುಕಟ್ಟೆಗೆ ಅವಕಾಶ ಕಲ್ಪಿಸಬೇಕಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here