ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಸಕ್ತ ವರ್ಷ ಅತಿವೃಷ್ಟಿಯ ನಡುವೆಯೂ ರೈತರು ಬೆಳೆದ ಉತ್ಪನ್ನಗಳಿಗೆ ಬೆಲೆ ಇಲ್ಲದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭ ಮಾಡಿರುವುದು ಶ್ಲಾಘನೀಯ. ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಬಿಸಿಎನ್ ಕಾಟನ್ ಇಂಡಸ್ಟ್ರಿಸ್‌ನ ಮಾಲೀಕ ಲೋಹಿತ ನೆಲವಿಗಿ ಹೇಳಿದರು.
ಪಟ್ಟಣದ ಬಿಸಿಎನ್ ಕಾಟನ್ ಇಂಡಸ್ಟ್ರಿಯಲ್ಲಿ ಶುಕ್ರವಾರ ಬೆಂಬಲ ಯೋಜನೆ ಅಡಿಯಲ್ಲಿ ಹತ್ತಿ ಖರೀದಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅತಿವೃಷ್ಟಿ, ಬರಗಾಲದಂತಹ ಸ್ಥಿತಿ ನಿರ್ಮಾಣವಾದಾಗ ರೈತರು ಆರ್ಥಿಕ, ಸಾಮಾಜಿಕ ಮತ್ತು ನೈತಿಕವಾಗಿ ಕುಗ್ಗಿ ಹೋಗಿದ್ದಾರೆ. ಈ ವರ್ಷ ಮುಂಗಾರು ಹಂಗಾಮಿನಲ್ಲಿ ಬೆಳೆದ ಹೆಸರು, ಈರುಳ್ಳಿ, ಶೇಂಗಾ, ಗೋವಿನಜೋಳ, ಬೆಳ್ಳುಳ್ಳಿ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿ ಹೋಗಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸಿರುವುದು ಶ್ಲಾಘನೀಯ. ಈಗ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಹತ್ತಿ ಖರೀದಿ ಕೇಂದ್ರ ಆರಂಭವಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಹಾಗೂ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಹತ್ತಿ ಖರೀದಿ ಅಧಿಕಾರಿ ರಾಜೇಶ್ ಮಾತನಾಡಿ, ರೈತರು ತಾವು ಬೆಳೆದ ಹತ್ತಿ ಬೆಳೆಯನ್ನು ಬೆಂಬಲ ಯೋಜನೆ ಅಡಿಯಲ್ಲಿ ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕು. ಯೋಜನೆಗಾಗಿ ನೋಂದಣಿ ಮಾಡಿಕೊಳ್ಳುವ ಅವಧಿಯನ್ನು ಸರ್ಕಾರ ಡಿಸೆಂಬರ್ 31ರವರೆಗೆ ವಿಸ್ತರಿಸಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಗೋವಿಂದೇಗೌಡ ಪಾಟೀಲ, ರಾಜಣ್ಣ ಹೊಳಲಾಪೂರ, ಎಪಿಎಂಸಿ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಪ್ರಕಾಶ ಹುಲಿ ಕೋಟಿ ಸೇರಿದಂತೆ ರೈತರು ಇದ್ದರು.


