ವಿಜಯಸಾಕ್ಷಿ ಸುದ್ದಿ, ಧಾರವಾಡ: ಬೆಣ್ಣೆ ಮತ್ತು ತುಪ್ಪರಿ ಹಳ್ಳದ ಅಂಚೆಯಲ್ಲಿರುವ ಗ್ರಾಮಗಳಲ್ಲಿ ರಾತ್ರಿ ವೇಳೆ ಪ್ರವಾಹ, ಅತಿವೃಷ್ಟಿಯಿಂದ ಆಗುವ ಹಾನಿ ತಪ್ಪಿಸಲು ಕ್ರಮ ವಹಿಸಬೇಕು ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.
ಅವರು ಇತ್ತೀಚೆಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ಜರುಗಿಸಿ ಮಾತನಾಡಿದರು.
ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳ ಕೆಲವು ಭಾಗಗಳಲ್ಲಿ ತುಂಬಿ ಹರಿಯುತ್ತಿದ್ದು, ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಬೇಕು. ಅದೇ ರೀತಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಾಗೂ ವಿದ್ಯುತ್ ತಂತಿಗಳು, ಕಂಬಗಳು ಬೀಳದ ಹಾಗೆ ಎಚ್ಚರವಹಿಸಿ ಯಾವುದೇ ಜೀವ ಹಾನಿ ಆಗದಂತೆ ನಿಗಾ ವಹಿಸಬೇಕು. ಕೋವಿಡ್ ಬಂದಿರುವುದರಿಂದ ಮುನ್ನೆಚ್ಚರಿಕೆ ವಹಿಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.
ಪ್ರಸಕ್ತ ಸಾಲಿಗೆ ಸಮೀಕ್ಷೆ ಮಾಡಿದಾಗ ವಿವಿಧ ಶಾಲೆಗಳ ಸುಮಾರು 62 ಕೊಠಡಿಗಳು ಸೋರಿಕೆ ಆಗುತ್ತಿವೆ. ಇವುಗಳ ತುರ್ತು ದುರಸ್ತಿಗೆ ಕ್ರಮ ವಹಿಸಬೇಕು. ಶಾಲೆಗಳು ಆರಂಭವಾಗುವ ಪೂರ್ವದಲ್ಲಿ ಶಾಲಾ ಕೊಠಡಿಗಳು ರಿಪೇರಿ ಆಗಬೇಕು ಎಂದು ಅವರು ತಿಳಿಸಿದರು.
ಹೆಸ್ಕಾಂ ಅಧಿಕಾರಿಗಳು ವಿದ್ಯತ್ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು. ವಿದ್ಯತ್ ಕಂಬಗಳು ವಾಲದಂತೆ ಹಾಗೂ ಬೀಳದಂತೆ ಮುಂಜಾಗೃತೆ ವಹಿಸಬೇಕು. ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಅಗತ್ಯವಿರುವ ರಸಗೊಬ್ಬರ, ಬೀಜ ಹಾಗೂ ಕಳೆ ನಿಯಂತ್ರಕ ಔಷಧಿಗಳನ್ನು ವಿತರಿಸಬೇಕು. ಪ್ರತಿ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿಯನ್ನು ರೈತರಿಗೆ ನೀಡಬೇಕು. ಖಾಸಗಿ ಅಂಗಡಿಗಳು ನಿಯಮಾನುಸಾರ ಬೀಜ, ಗೊಬ್ಬರಗಳನ್ನು ಮಾರಾಟ ಮಾಡಬೇಕೆಂದು ಸಚಿವರು ನಿರ್ದೇಶಿಸಿದರು.
ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಎಂ.ಬ್ಯಾಕೋಡ್, ಉಪ ಪೊಲೀಸ್ ಆಯುಕ್ತ ಮಾನಿಂಗ ನಂದಗಾವಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ರುದ್ರೇಶ ಘಾಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಮೇ 22 ರಿಂದ ಸರಿಯುತ್ತಿರುವ ಅಕಾಲಿಕ ಮಳೆಯಿಂದ ಜಿಲ್ಲೆಯ ಕಲಘಟಗಿ ಮತ್ತು ಧಾರವಾಡ ಭಾಗಗಳಲ್ಲಿ ಅತಿ ಹೆಚ್ಚು ಮಳೆಯಾಗಿದ್ದು, ಪೂರ್ವ ಮುಂಗಾರಿನಿಂದ ಧಾರವಾಡ ತಾಲೂಕು ಮತ್ತು ಕುಂದಗೋಳ ತಾಲೂಕಿನಲ್ಲಿ 2 ಜನ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಅವರ ಕುಟುಂಬದವರಿಗೆ ಪರಿಹಾರ ಕೊಡಲಾಗಿದೆ ಎಂದು ಹೇಳಿದರು.