ಬೆಂಗಳೂರು: ಇತ್ತಿಚಿಗಷ್ಟೆ ಯುವಕ-ಯುವತಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಕೂಟರ್‌ನಲ್ಲಿ ಕುಳಿತಿದ್ದ ಹಿಂದು ಯುವಕ- ಮುಸ್ಲಿಂ ಯುವತಿಯ ಮೇಲೆ ನೈತಿಕ ಪೊಲೀಸ್‌ಗಿರಿ ನಡೆಸಲಾಗಿತ್ತು. ಯುವಕ -ಯುವತಿಯ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ಪಾರ್ಕೊಂದರಲ್ಲಿ ಮುಸ್ಲಿಂ ಯುವತಿ, ಹಿಂದೂ ಯುವಕ ಕುಳಿತಿದ್ದಾಗ ಅವರ ಬಳಿಗೆ ಬಂದ ಯುವಕರ ತಂಡವೊಂದು, ‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’ ಎನ್ನುತ್ತ ವಿಡಿಯೋ ರೆಕಾರ್ಡ್ ಮಾಡಲು ಶುರು ಮಾಡಿದೆ.
ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಯುವತಿ ಬೇಡಿಕೊಂಡಿದ್ದರೂ ಬಿಡದೆ, ‘ಕಮಿಟಿಯವರು ಬರ್ತಾರೆ ಇರು’ ಎಂದು ಹೇಳಿ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಸದ್ಯ ನೈತಿಕ ಪೊಲೀಸ್ಗಿರಿಯ ವಿಡಿಯೋವನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ಸ್ಪಷ್ಟ ಮಾಹಿತಿ ದೊರೆಯಬೇಕಿದೆ. ಸದ್ಯ, ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.