ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಜಿಲ್ಲೆಗೆ ಸಮರ್ಪಕವಾಗಿ ರಸಗೊಬ್ಬರ ಪೂರೈಸುವ ಕುರಿತು ಮತ್ತು ಬೆಳೆ ವಿಮೆಯಲ್ಲಿ ಏಜೆಂಟರ ಹಾವಳಿ ತಪ್ಪಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಜಯನಗೌಡರ ನೇತೃತ್ವದಲ್ಲಿ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಂಕರಗೌಡ ಜಯನಗೌಡರ ಮಾತನಾಡಿ, ಈಗಾಗಲೇ ಗೋವಿನಜೋಳ, ಹೆಸರು, ತೊಗರಿ, ಈರುಳ್ಳಿ, ಮೆಣಸಿನಕಾಯಿ ಇತ್ಯಾದಿ ಬೆಳೆಗಳಿಗೆ ಯೂರಿಯಾ, ಡಿ.ಎ.ಪಿ ಅಗತ್ಯತೆಯಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕೆಲ ಗೊಬ್ಬರದ ವ್ಯಾಪಾರಿಗಳು ಗೊಬ್ಬರದ ಜೊತೆಗೆ ಕ್ರಿಮಿನಾಶಕ ಉತ್ಪನ್ನಗಳನ್ನು ರೈತರಿಗೆ ಕೊಳ್ಳುವಂತೆ ತಾಕೀತು ಮಾಡುತ್ತಿದ್ದಾರೆ. ಇದು ರೈತರಿಗೆ ಹೊರೆಯಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರ ಕಾಳಸಂತೆ ಮಾರಾಟವಾಗುತ್ತಿದೆ. ಕೂಡಲೇ ಇಂತಹವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಈಗಾಗಲೇ ಮುಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ 2025-26ನೇ ಸಾಲಿನ ಬೆಳೆವಿಮೆ ತುಂಬುತ್ತಿದ್ದಾರೆ. ನಿಜವಾದ ರೈತರಿಗೆ ಬೆಳೆವಿಮೆ ತಲುಪಿಸಬೇಕು. ಗದಗ ಜಿಲ್ಲೆಯಲ್ಲಿ ಕಮೀಷನ್ ಏಜೆಂಟರ ಹಾವಳಿ ಹೆಚ್ಚಾಗಿದೆ. ಕೂಡಲೇ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಸುರೇಶ ಸಿಂದಗಿ ಮಾತನಾಡಿ, ಬೆಣ್ಣೆಹಳ್ಳದ ನೀರಿನಿಂದ ಪ್ರತಿ ವರ್ಷ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗುತ್ತಿದ್ದು, ಫಲವತ್ತಾದ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗುತ್ತಿದೆ. ಮೇಲ್ಮಟ್ಟದ ಬ್ಯಾರೇಜ್‌ಗಳನ್ನು ನಿರ್ಮಿಸುವ ಮೂಲಕ ನೀರಿನ ಸದ್ಬಳಕೆ ಮಾಡಿಕೊಳ್ಳಲು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಬಸವರಾಜ ನವಲಗುಂದ, ರೈತ ಸಂಘಟನೆ ಪದಾಧಿಕಾರಿಗಳಾದ ಬಸವರಾಜ ಮರಾಠ, ಸುನೀಲ ಕರ್ಣೆ, ವೀರೇಶ ಪಾಂಡ್ರೆ, ಮಂಜು ವಡ್ಡರ, ಲಕ್ಷ್ಮವ್ವ ಮೆಳ್ಳಿಗಟ್ಟಿ, ರೇವಣಸಿದ್ದಪ್ಪ ಬಿಡ್ನಾಳ, ಶಿವಾಜಿ ಪರಪ್ಪನವರ, ಮಂಜಪ್ಪ ಬುರ್ಲಿ, ವಿರೇಶ ಯಳಮಲಿ, ನಾಗರಾಜ ಸಾಳಂಕಿ ಮುಂತಾದವರಿದ್ದರು.