ವಿಜಯಸಾಕ್ಷಿ ಸುದ್ದಿ, ಗದಗ : 2024-25ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಉಂಡೆನಾಮ ಹಾಕಿದ್ದರೆ, ಪ್ರಧಾನಿ ನರೇಂದ್ರ ಮೋದಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೇ, ರಾಜ್ಯದ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ರಾಜ್ಯದ ಜನತೆಯ ಕೈಗೆ ಚೊಂಬು ಕೊಟ್ಟಿದ್ದಾರೆ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ, ಗದಗ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜೆಟ್ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮನವಿಗಳನ್ನು ಮುಂದಿರಿಸಿತ್ತು. ಆದರೆ ಯಾವುದೇ ಬೇಡಿಕೆಗಳಿಗೂ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನ ಒದಗಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮ್ ಘೋಷಿಸಿದ್ದರು. ಆದರೆ ಈ ಯೋಜನೆಗೆ ನಯಾ ಪೈಸೆ ಒದಗಿಸಿಲ್ಲ. ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೇ ರೈತರಿಗೆ ಮೋಸ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಯುವಜನರ ಹಣೆಗೆ ನಾಮ ಬಳಿದು, ಈಗ ಪ್ರತಿ ವರ್ಷ ಕೇವಲ 75 ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುತ್ತ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಿದ್ದಾರೆ. ರೈತರ ಆದಾಯ ದ್ವಿಗುಣ ಆಗಲಿಲ್ಲ, ಗುಡಿಸಲು ಮುಕ್ತ ಭಾರತ ಆಗಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿ ಆಗಲಿಲ್ಲ, 370 ಕಾಯಿದೆ ಮೂಲಕ ವಿಷೇಶ ಸ್ಥಾನಮಾನ ನೀಡಿದ ಜಮ್ಮು ಕಾಶ್ಮೀರ ಉಗ್ರಗಾಮಿ ಮುಕ್ತ ರಾಜ್ಯವಾಗಲಿಲ್ಲ ಜೊತೆಗೆ ದೇಶದ ಪ್ರತಿ ಮನೆಗೂ ಕರೆಂಟ್ ಬರಲಿಲ್ಲ ಎಂದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಬಿಹಾರ ಮತ್ತು ಆಂಧ್ರಕ್ಕೆ ಸಿಂಹಪಾಲು ಅನುದಾನ ನೀಡಿದೆ. ಸರ್ಕಾರ ಬೀಳುವ ಭಯದಲ್ಲಿ ನಡುಗಿ ಅನುದಾನ ನೀಡಿದ ಪ್ರಧಾನಿ ಮೋದಿ ಅವರು ಬಿಹಾರಕ್ಕೆ ವಿವಿಧ ರಸ್ತೆ ಯೋಜನೆಗಳಿಗೆ 26,000 ಕೋಟಿ ರೂ ಅನುದಾನ ಮತ್ತು ಆಂಧ್ರಕ್ಕೆ ಸುಮಾರು 15,000 ಕೋಟಿ ಅನುದಾನ ನೀಡಿದೆ. ಇದರ ನಡುವೆ ಕರ್ನಾಟಕ ರಾಜ್ಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.